
ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಉಭಯ ತಂಡಗಳಿಗೂ ಈ ಬಾರಿ ಹೊಸ ನಾಯಕನ ನೇಮಕವಾಗಿದ್ದು, ಅಜಿಂಕ್ಯ ರಹಾನೆ ಮತ್ತು ರಜತ್ ಪಾಟೀದಾರ್ ಮುಖಾಮುಖಿಯಾಗಲಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿ ಕೆಕೆಆರ್ ಮತ್ತು ಪ್ರಶಸ್ತಿ ಬರ ನೀಗಿಸಿಕೊಳ್ಳಲು ಆರ್‌ಸಿಬಿ ಎದುರು ನೋಡುತ್ತಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಯಾವಾಗಲೂ ಮೇಲುಗೈ ಸಾಧಿಸಿದೆ. ಈ ಬಾರಿ ಆರ್‌ಸಿಬಿ ಹೊಸ ತಂಡವನ್ನು ಕಟ್ಟಿದ್ದು, ಗೆದ್ದೇ ಗೆಲ್ಲುವ ಭರವಸೆಯಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಡನ್ ಗಾರ್ಡನ್ಸ್‌ನ ಪಿಚ್ ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಗೌತಮ್ ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದಾಗ, ಅದು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿತ್ತು. ಸುನಿಲ್ ನರೈನ್ ತಮ್ಮ ಸ್ಪಿನ್ ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಹುಲ್ಲಿನ ಉಪಸ್ಥಿತಿಯಿಂದಾಗಿ ಈ ಪಿಚ್ ವೇಗಿಗಳಿಗೆ ಸಹ ಅನುಕೂಲಕರವಾಗಿತ್ತು. ಆದಾಗ್ಯೂ, ಐಪಿಎಲ್ 2024ನೇ ಆವೃತ್ತಿಯಲ್ಲಿ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಪ್ರಯೋಜನ ನೀಡಿತು ಮತ್ತು ಹೆಚ್ಚಿನ ಸ್ಕೋರ್‌ಗಳಿಗೆ ನೆರವಾಯಿತು. ಈ ಆವೃತ್ತಿಯಲ್ಲಿಯೂ ಬ್ಯಾಟರ್‌ಗಳಿಗೆ ಅನುಕೂಲಕರವಾಗಿಯೇ ಮುಂದುವರಿಯುವ ನಿರೀಕ್ಷೆಯಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಮಳೆ ಬರುವ ನಿರೀಕ್ಷೆಯಿದೆ. ಪಂದ್ಯ ಆರಂಭವಾಗುವ ಹೊತ್ತಿಗೆ ಮಳೆ ಬೀಳುವ ಸಾಧ್ಯತೆ ಕೇವಲ ಶೇ 10 ರಷ್ಟು ಮಾತ್ರ ಇದ್ದು, ರಾತ್ರಿ 11 ಗಂಟೆಯ ಸುಮಾರಿಗೆ ಮಳೆ ಬೀಳುವ ಸಾಧ್ಯತೆ ಶೇ 70 ರಷ್ಟಿದೆ. ಆದರೆ, ಆ ವೇಳೆಗಾಗಲೇ ಪಂದ್ಯ ಫಲಿತಾಂಶ ಲಭ್ಯವಾಗಿರುವ ಸಾಧ್ಯತೆ ಇದೆ. ಒಂದು ವೇಳೆ ಆರಂಭಿಕ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೆ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಆದರೆ, ಇದು ವ್ಯಾಪಕ ನಿರೀಕ್ಷೆ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ತಣ್ಣೀರೆರೆಚಿದಂತಾಗುತ್ತದೆ.
Advertisement