
ಲಾಹೋರ್: ಹಠ ಮಾಡಿ ಪಟ್ಟು ಹಿಡಿದು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನೂರಾರು ಕೋಟಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದೆ ಎಂಬ ವರದಿಗಳ ನಡುವೆಯೇ ಟೂರ್ನಿ ಆಯೋಜನೆಯಿಂದ ತನಗೆ ನಷ್ಟವಾಗಿಲ್ಲ.. ಬದಲಿಗೆ ಲಾಭವೇ ಆಗಿದೆ ಎಂದು ಪಿಸಿಬಿ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗುರುವಾರ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಸುಮಾರು 10 ಮಿಲಿಯನ್ ಯುಎಸ್ ಡಾಲರ್ (ಸುಮಾರು 86 ಕೋಟಿ ರೂ.) ಲಾಭ ಗಳಿಸಿದೆ ಎಂದು ಹೇಳಿಕೊಂಡಿದೆ. ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಈ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆಯೋಜಿಸುವ ಮೂಲಕ ಪಿಸಿಬಿ ಲಾಭಾಂಶ ಕಂಡಿದೆ ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ವಕ್ತಾರ ಅಮೀರ್ ಮಿರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜಾವೇದ್ ಮುರ್ತಾಜಾ, 'ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಕ್ರೀಡಾಂಗಣಗಳನ್ನು ನವೀಕರಿಸಲು ಭಾರಿ ಮೊತ್ತವನ್ನು ಖರ್ಚು ಮಾಡುವ ಮೂಲಕ ಮಂಡಳಿಯು ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ.
ಪಂದ್ಯಾವಳಿಯ ಎಲ್ಲಾ ವೆಚ್ಚಗಳನ್ನು ಐಸಿಸಿ ಭರಿಸಿದೆ" ಎಂದು ಹೇಳಿದರು. ಅಂತೆಯೇ ಪಿಸಿಬಿ ಗೇಟ್ ಮನಿ ಮತ್ತು ಟಿಕೆಟ್ ಮಾರಾಟದ ಮೂಲಕ ಆದಾಯವನ್ನು ಗಳಿಸಿದೆ. "ಹೆಚ್ಚುವರಿಯಾಗಿ, ಲೆಕ್ಕಪರಿಶೋಧನೆಯ ನಂತರ, ನಾವು ಐಸಿಸಿಯಿಂದ ಇನ್ನೂ 3 ಬಿಲಿಯನ್ ರೂ.ಗಳನ್ನು ಪಡೆಯುವ ನಿರೀಕ್ಷೆಯಿದೆ" ಎಂದು ಅವರು ಹೇಳಿದರು.
ಪಿಸಿಬಿ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ 2 ಬಿಲಿಯನ್ ರೂ.ಗಳ ಗಳಿಕೆಯನ್ನು ಗುರಿಯಾಗಿಸಿಕೊಂಡಿತ್ತು, ಆದರೆ ಅವರು ಈ ಗುರಿ ಮೀರಿದ್ದು, ಪಿಸಿಬಿ ಪಾಲಿಗೆ ಒಟ್ಟು 4 ಬಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆ ಇದೆ. 2023-24ರ ಆರ್ಥಿಕ ವರ್ಷದಲ್ಲಿ ಪಿಸಿಬಿಯ ಒಟ್ಟು ಆದಾಯವು 10 ಬಿಲಿಯನ್ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 40%ರಷ್ಟು ಹೆಚ್ಚಳವಾಗಿದೆ ಎಂದು ಅಮೀರ್ ಮಿರ್ ಹೇಳಿದ್ದಾರೆ.
"ಈ ಆರ್ಥಿಕ ಬಲದೊಂದಿಗೆ, ಪಿಸಿಬಿ ಈಗ ವಿಶ್ವದ ಅಗ್ರ ಮೂರು ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದಾಗಿದೆ. ಮಂಡಳಿಯು 40 ಮಿಲಿಯನ್ ತೆರಿಗೆಗಳನ್ನು ಪಾವತಿಸಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹಣಕಾಸಿನ ಗುರಿಗಳನ್ನು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಂಡಳಿಯ ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮತ್ತೋರ್ವ ಪಿಸಿಬಿ ವಕ್ತಾರ ಮುರ್ತಾಜಾ ಹೇಳಿದರು.
ಪಿಸಿಬಿ ಹಲವಾರು ಹಣಕಾಸು ಹೂಡಿಕೆಗಳನ್ನು ಹೊಂದಿದೆ ಮತ್ತು ಕ್ರೀಡಾಂಗಣ ನವೀಕರಣಕ್ಕಾಗಿ ಬಜೆಟ್ ಅನ್ನು 18 ಬಿಲಿಯನ್ ರೂ.ಗಳಿಗೆ ನಿಗದಿಪಡಿಸಲಾಗಿದೆ. ಯೋಜನೆಯ ಮೊದಲ ಹಂತಕ್ಕಾಗಿ, 12 ಬಿಲಿಯನ್ ರೂ.ಗಳನ್ನು ನಿಗದಿಪಡಿಸಲಾಗಿತ್ತು. 10.5 ಬಿಲಿಯನ್ ರೂ.ಗಳನ್ನು ಈಗಾಗಲೇ ಖರ್ಚು ಮಾಡಲಾಗಿದೆ. "ಉಳಿದ ಹಣವನ್ನು ಕರಾಚಿ, ಫೈಸಲಾಬಾದ್ ಮತ್ತು ರಾವಲ್ಪಿಂಡಿ ಸೇರಿದಂತೆ ಇವುಗಳನ್ನು ಮತ್ತು ಇತರ ಕ್ರೀಡಾಂಗಣಗಳನ್ನು ಮತ್ತಷ್ಟು ಸುಧಾರಿಸಲು ಬಳಸಲಾಗುವುದು. ಪಿಸಿಬಿ ಕೇವಲ ನಾಲ್ಕು ತಿಂಗಳಲ್ಲಿ ಪ್ರಮುಖ ನವೀಕರಣಗಳನ್ನು ಪೂರ್ಣಗೊಳಿಸಿದೆ, ಸ್ಥಳಗಳು ಈಗ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸುತ್ತದೆ ಎಂದು ಸಿಎಫ್‌ಒ ಮುರ್ತಾಜಾ ಹೇಳಿದರು.
"29 ವರ್ಷಗಳ ನಂತರ, ಒಂದು ಪ್ರಮುಖ ಕ್ರೀಡಾಂಗಣ ನವೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು, ಇದು ಮಹತ್ವದ ಕಾರ್ಯವಾಗಿತ್ತು. ದೇಶೀಯ ಪುರುಷ ಮತ್ತು ಮಹಿಳಾ ಆಟಗಾರರ ವೇತನ ಕಡಿತದ ಬಗ್ಗೆ ಮಾತನಾಡಿದ ಮೀರ್, ಅಧ್ಯಕ್ಷ ನಖ್ವಿ ಅವರು ತಮ್ಮ ವೇತನ ಕಡಿತಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಮಿರ್ ಹೇಳಿದರು. ಪಾರದರ್ಶಕತೆಗಾಗಿ ಪಿಸಿಬಿ ಶೀಘ್ರದಲ್ಲೇ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ಎಲ್ಲಾ ಹಣಕಾಸಿನ ವಿವರಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಿದೆ ಎಂದು ಮುರ್ತಾಜಾ ಹೇಳಿದರು.
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಂತಗಳಿಗೆ ಪಿಸಿಬಿ ಗೈರುಹಾಜರಾದ ಬಗ್ಗೆ, ಐಸಿಸಿಯಿಂದ ಇನ್ನೂ ಸಂಪೂರ್ಣ ವಿವರಣೆಗಾಗಿ ಕಾಯುತ್ತಿದ್ದೇವೆ ಎಂದು ಮಿರ್ ಹೇಳಿದರು.
Advertisement