
ಮುಂಬೈ: ಕ್ರಿಕೆಟಿಗ ಯುಜವೇಂದ್ರ ಚಹಲ್ ಜೊತೆಗಿನ ವಿವಾಹ ವಿಚ್ಚೇದನದ ಬೆನ್ನಲ್ಲೇ ಮಾಜಿ ಪತ್ನಿ ಧನಶ್ರೀ ವರ್ಮಾ ಕೌಟುಂಬಿಕ ಹಿಂಸಾಚಾರದ ಕುರಿತ ಹಾಡು ಬಿಡುಗಡೆ ಮಾಡಿದ್ದಾರೆ.
ಹೌದು.. ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಮತ್ತು ನೃತ್ಯ ನಿರ್ದೇಶಿಕಿ ಧನಶ್ರಿ ವರ್ಮಾ ಗುರುವಾರ ಹೊಸ ಆಲ್ಬಂವೊಂದನ್ನು ಬಿಡುಗಡೆ ಮಾಡಿದ್ದು, ವಿವಾಹೇತರ ಸಂಬಂಧ, ಕೌಟುಂಬಿಕ ಹಿಂಸಾಚಾರದ ಬಲಿಯಾಗುವ ಹೆಣ್ಣಿನ ಕುರಿತ ಹಾಡಿನ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.
‘ದೇಖಾ ಜಿ ದೇಖಾ ಮೇ‘ ಶೀರ್ಷಿಕೆಯ ಈ ಹಾಡಿನಲ್ಲಿ ಧನಶ್ರೀ ವರ್ಮಾ ಕೌಟುಂಬಿಕ ದೌರ್ಜನ್ಯಕ್ಕೊಳಗಾಗುವ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರೊಂದಿಗೆ ಅಧಿಕೃತವಾಗಿ ವಿಚ್ಚೇದನ ಪಡೆದ ದಿನವೇ ಈ ಹಾಡನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.
ಹೊಸ ಹಾಡಿನ ಪರಿಕಲ್ಪನೆ ಬಗ್ಗೆ ಧನಶ್ರೀ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಹಾಡಿನ ಮೂಲಕ ತಮ್ಮ ಹಿಂದಿನ ವೈವಾಹಿಕ ಜೀವನದ ಅನುಭವಿಸಿದ ನೋವನ್ನು ಪರೋಕ್ಷವಾಗಿ ತೋರಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಅಂದಹಾಗೆ ಜ್ಯೋತಿ ನೂರಾನ್ ಅವರು ಈ ಹಾಡಿಗೆ ದನಿ ನೀಡಿದ್ದು, ಜಾನಿ ಅವರು ಸಂಗೀತ ಸಂಯೋಜಿಸುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದಾರೆ. ಭೂಷಣ್ ಕುಮಾರ್ ಒಡೆತನದ ಟಿ–ಸೀರಿಸ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ರಾಜಸ್ಥಾನದ ಸೆಟ್‌ವೊಂದರಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ಧನಶ್ರೀ ವರ್ಮಾ ಅವರೊಂದಿಗೆ ಪಾತಾಳ್ ಲೋಕ್ ಖ್ಯಾತಿಯ ನಟ ಇಶ್ವಕ್ ಸಿಂಗ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಯುಜುವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಚೇದನ
ಏನತ್ಮಧ್ಯೆ, ಧನಶ್ರೀ ವರ್ಮಾ ಮತ್ತು ಚಹಲ್ ಅವರು ತಮ್ಮ ದಾಂಪತ್ಯ ಜೀವನವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ. ಧನಶ್ರೀ ವರ್ಮಾ ಅವರಿಗೆ 4.75 ಕೋಟಿ ರೂ ಜೀವನಾಂಶ ನೀಡಲು ಚಹಲ್ ಅವರು ಒಪ್ಪಿಕೊಂಡಿದ್ದಾರೆ. ಈ ಜೋಡಿ 2020ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ನಿನ್ನೆ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ಅಧಿಕೃತವಾಗಿ ವಿಚ್ಚೇದನ ನೀಡಿದೆ.
Advertisement