
ಇಸ್ಲಾಮಾಬಾದ್: ಹಠ ಹಿಡಿದು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವಂತಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐ ಕೂಡ ಭಾರಿ ನಷ್ಟ ಅನುಭವಿಸುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಯಿಂದ ಪಾಕಿಸ್ತಾನ ನೂರಾರು ಕೋಟಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದೆ ಎಂಬ ವರದಿಗಳ ನಡುವೆಯೇ ಟೂರ್ನಿ ಆಯೋಜನೆಯಿಂದ ತನಗೆ ನಷ್ಟವಾಗಿಲ್ಲ.. ಬದಲಿಗೆ ಲಾಭವೇ ಆಗಿದೆ ಎಂದು ಪಿಸಿಬಿ ಸ್ಪಷ್ಟನೆ ನೀಡಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಸುಮಾರು 10 ಮಿಲಿಯನ್ ಯುಎಸ್ ಡಾಲರ್ (ಸುಮಾರು 86 ಕೋಟಿ ರೂ.) ಲಾಭ ಗಳಿಸಿದೆ ಎಂದು ಹೇಳಿಕೊಂಡಿದೆ.
ಪಾಕ್ ಮಂಡಳಿಯು ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ. ಪಂದ್ಯಾವಳಿಯ ಎಲ್ಲಾ ವೆಚ್ಚಗಳನ್ನು ಐಸಿಸಿ ಭರಿಸಿದೆ". ಪಿಸಿಬಿ ಗೇಟ್ ಮನಿ ಮತ್ತು ಟಿಕೆಟ್ ಮಾರಾಟದ ಮೂಲಕ ಆದಾಯವನ್ನು ಗಳಿಸಿದೆ. "ಹೆಚ್ಚುವರಿಯಾಗಿ, ಲೆಕ್ಕಪರಿಶೋಧನೆಯ ನಂತರ, ನಾವು ಐಸಿಸಿಯಿಂದ ಇನ್ನೂ 3 ಬಿಲಿಯನ್ ರೂ.ಗಳನ್ನು ಪಡೆಯುವ ನಿರೀಕ್ಷೆಯಿದೆ.
ಪಿಸಿಬಿ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ 2 ಬಿಲಿಯನ್ ರೂ.ಗಳ ಗಳಿಕೆಯನ್ನು ಗುರಿಯಾಗಿಸಿಕೊಂಡಿತ್ತು, ಆದರೆ ಅವರು ಈ ಗುರಿ ಮೀರಿದ್ದು, ಪಿಸಿಬಿ ಪಾಲಿಗೆ ಒಟ್ಟು 4 ಬಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆ ಇದೆ. 2023-24ರ ಆರ್ಥಿಕ ವರ್ಷದಲ್ಲಿ ಪಿಸಿಬಿಯ ಒಟ್ಟು ಆದಾಯವು 10 ಬಿಲಿಯನ್ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 40%ರಷ್ಟು ಹೆಚ್ಚಳವಾಗಿದೆ ಎಂದು ಅಮೀರ್ ಮಿರ್ ಹೇಳಿದ್ದಾರೆ.
"ಈ ಆರ್ಥಿಕ ಬಲದೊಂದಿಗೆ, ಪಿಸಿಬಿ ಈಗ ವಿಶ್ವದ ಅಗ್ರ ಮೂರು ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದಾಗಿದೆ. ಮಂಡಳಿಯು 40 ಮಿಲಿಯನ್ ತೆರಿಗೆಗಳನ್ನು ಪಾವತಿಸಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹಣಕಾಸಿನ ಗುರಿಗಳನ್ನು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಂಡಳಿಯ ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮತ್ತೋರ್ವ ಪಿಸಿಬಿ ವಕ್ತಾರ ಮುರ್ತಾಜಾ ಹೇಳಿದರು.
ಭಾರತಕ್ಕೆ ಭಾರಿ ನಷ್ಟ
ಇದೇ ವೇಳೆ ಮಾತನಾಡಿದ ಪಿಸಿಬಿ ವಕ್ತಾರ ಅಮೀರ್ ಮಿರ್, "ಎಲ್ಲಾ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಐಸಿಸಿ ಮಾಡುತ್ತದೆ. ಭಾರತ ಪಾಕಿಸ್ತಾನಕ್ಕೆ ಹಾನಿ ಮಾಡಲು ಪ್ರಯತ್ನಿಸಿದ್ದರೆ, ನೀವು ಕೂಡ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಭಾರತ vs ಪಾಕಿಸ್ತಾನ ಪಂದ್ಯ ಬಿಸಿ ಕೇಕ್‌ನಂತೆ ಮಾರಾಟವಾಗುತ್ತದೆ ಎಂದು ನಿಮಗೆ ತಿಳಿದಿದೆ. ಮುಂದಿನ ಮೂರು ವರ್ಷಗಳ ಕಾಲ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಪಾಕಿಸ್ತಾನಕ್ಕೆ ಯಾವುದೇ ಆರ್ಥಿಕ ನಷ್ಟವಾದರೆ, ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸದಿದ್ದರೆ ಭಾರತವು ಹೆಚ್ಚಿನ ಆರ್ಥಿಕ ನಷ್ಟವನ್ನು ಅನುಭವಿಸುತ್ತದೆ" ಎಂದು ಹೇಳಿದರು.
ಅಂದಹಾಗೆ ಭಾರತ ಕೊನೆಯ ಬಾರಿಗೆ 2005-06ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಅಂತೆಯೇ ಪಾಕಿಸ್ತಾನ ಕೊನೆಯ ಬಾರಿಗೆ 2012-13ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಭಾರತ ಪ್ರವಾಸ ಮಾಡಿತ್ತು. ಆ ಬಳಿಕ ಉಭಯ ತಂಡಗಳು ಐಸಿಸಿ ಈವೆಂಟ್ ಗಳಲ್ಲಿ ಬಿಟ್ಟರೆ ದ್ವಿಪಕ್ಷೀಯ ಟೂರ್ನಿಗಳನ್ನಾಡಿಲ್ಲ.
Advertisement