IPL 2025: ಡಾ. ರಾಜ್‌ಕುಮಾರ್ ಡೈಲಾಗ್ ಹೇಳಿ ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟೀದಾರ್!
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 18ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ 65 ದಿನಗಳಲ್ಲಿ, 10 ಬಲಿಷ್ಠ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ 75 ಪಂದ್ಯಗಳಲ್ಲಿ ಸೆಣಸಾಡಲಿವೆ. ಈ ರೋಮಾಂಚಕ ಕ್ರಿಕೆಟ್ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಐಪಿಎಲ್ ಫೀವರ್ ಶುರುವಾಗಿದೆ. ಇಂದು ಸಂಜೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟೀದಾರ್ ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್‌ಕುಮಾರ್ ಅವರ ಪ್ರಸಿದ್ಧ ಸಂಭಾಷಣೆಯನ್ನು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಆವೃತ್ತಿಯಲ್ಲಿ ಬೆಂಗಳೂರು ಮೂಲಕ ಪ್ರಾಂಚೈಸಿಯ ನಾಯಕನಾಗಿ ಆಯ್ಕೆಯಾಗಿರುವ ರಜತ್ ತಂಡವನ್ನು ಹೇಗೆ ಮುನ್ನಡೆಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಇಂದು ಮಿಸ್ಟರ್ ನಾಗ್ಸ್ ಅವರೊಂದಿಗೆ ಇನ್‌ಸೈಡರ್ ಶೋನಲ್ಲಿ ಕಾಣಿಸಿಕೊಂಡ ರಜತ್, ಎರಡೂ ಕೈಗಳನ್ನು ಜೋಡಿಸಿ ಡಾ. ರಾಜ್‌ಕುಮಾರ್ ಅವರ 'ಅಭಿಮಾನಿಗಳೇ ನಮ್ಮ ದೇವರು' ಎಂದು ಹೇಳಿದ್ದಾರೆ. RCB ಅಭಿಮಾನಿಗಳ ಅಚಲ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ಬಾಯಿಂದ ಕನ್ನಡವನ್ನು ಕೇಳಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ 'ಆರ್‌ಸಿಬಿ ನಮ್ಮ ಉಸಿರು, ಕನ್ನಡ ನಮ್ಮ ಹೆಮ್ಮೆ ಮತ್ತು ಈ ಬಾರಿ ಕಪ್ ನಮ್ಮದು' ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಡಾ. ರಾಜ್‌ಕುಮಾರ್ ಅಲ್ಲ ಡಾ. ರಾಜ್‌ಕುಮಾರ್ ಸರ್ ಎಂದು ಸಂಭೋದಿಸಿ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
2022 ರಿಂದ 2024 ರವರೆಗೆ ತಂಡವನ್ನು ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಅವರನ್ನು ಐಪಿಎಲ್ ಮೆಗಾ ಆವೃತ್ತಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಫಾಫ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಬರವನ್ನು ಎದುರಿಸುತ್ತಿರುವ ಆರ್‌ಸಿಬಿ ಈ ಬಾರಿ ಉತ್ತಮ ತಂಡವನ್ನು ಕಟ್ಟಿದ್ದು, ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಇಂದು ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ