
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ 18ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಆಟವಾಗಿ ಮಾತ್ರ ಉಳಿದಿಲ್ಲ. ಬದಲಿಗೆ ತಮ್ಮ ತಂಡಗಳ ಉತ್ತಮ ಪ್ರದರ್ಶನವನ್ನು ನೋಡುವ ಅಭಿಮಾನಿಗಳ ಉತ್ಸಾಹ, ಶಕ್ತಿ, ಘರ್ಜನೆಯ ಕೇಂದ್ರವಾಗಿರುತ್ತದೆ. ಇದೇ ಕಾರಣಕ್ಕೆ ಬಿಸಿಸಿಐ ಈಗ ದೇಶದ ಪ್ರತಿಯೊಂದು ಮೂಲೆ ಮತ್ತು ಮೂಲೆಯನ್ನು ತಲುಪುವಂತೆ ಮಾಡಲು ಮುಂದಾಗಿದೆ.
ಐಪಿಎಲ್ ಪಂದ್ಯಗಳು ಪ್ರಮುಖ ನಗರಗಳಲ್ಲಿನ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿವೆ. ಹೀಗಾಗಿ, ಇತರೆ ಕಡೆಗಳ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲು ಬಿಸಿಸಿಐ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡುತ್ತಿದೆ. 2015ರಿಂದ ಪ್ರತಿ ವರ್ಷ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈ ಬಾರಿ, ಫ್ಯಾನ್ ಪಾರ್ಕ್‌ಗಳು ಮಾರ್ಚ್ 22 ರಿಂದ ಮೇ 25 ರವರೆಗೆ 23 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 50 ನಗರಗಳಲ್ಲಿ ನಡೆಯಲಿದ್ದು, ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ಅಭಿಮಾನಿಗಳನ್ನು ರಂಜಿಸಲಿವೆ.
ರೋಹ್ಟಕ್, ಬಿಕಾನೇರ್ ಮತ್ತು ಗ್ಯಾಂಗ್ಟಕ್ ಬೀದಿಗಳಿಂದ ಹಿಡಿದು ಕಾಕಿನಾಡ, ದಿಮಾಪುರ ಮತ್ತು ಕಾರೈಕಲ್ ನಂತಹ ಹೊಸ ಸ್ಥಳಗಳಲ್ಲಿಯೂ ಈ ಬಾರಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿವೆ. ಮೊದಲ ಬಾರಿಗೆ, ತಿನ್ಸುಕಿಯಾ (ಅಸ್ಸಾಂ) ಮತ್ತು ಪುರುಲಿಯಾ (ಪಶ್ಚಿಮ ಬಂಗಾಳ) ನಂತಹ ಪಟ್ಟಣಗಳಲ್ಲಿಯೂ ಅಭಿಮಾನಿಗಳಿಗೆ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿವೆ.
ಫ್ಯಾನ್ ಪಾರ್ಕ್‌ಗಳಿಗೆ ಉಚಿತವಾಗಿ ಪ್ರವೇಶವಿರುತ್ತದೆ. ಫ್ಯಾನ್ ಪಾರ್ಕ್‌ನಲ್ಲಿ ದೊಡ್ಡ ಪರದೆ ಮೇಲೆ ಐಪಿಎಲ್ ಪಂದ್ಯಗಳ ನೇರಪ್ರಸಾರ, ಸಂಗೀತ, ಮನರಂಜನೆ, ಫುಡ್ ಕೋರ್ಟ್‌ಗಳು, ಮಕ್ಕಳ ಆಟದ ವಲಯ ಮತ್ತು ವರ್ಚುವಲ್ ಬ್ಯಾಟಿಂಗ್ ವಲಯ, ನೆಟ್‌ಗಳ ಮೂಲಕ ಬೌಲಿಂಗ್, ಫೇಸ್-ಪೇಂಟಿಂಗ್, ಪ್ರತಿಕೃತಿ ಡಗೌಟ್‌ಗಳು, ಚಿಯರ್-ಒ-ಮೀಟರ್ ಮತ್ತು ಉದ್ಯಾನವನಗಳಲ್ಲಿ 360° ಫೋಟೋ ಬೂತ್‌ಗಳು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳು ಇರುತ್ತವೆ.
ರಾಜ್ಯದ ನಾಲ್ಕು ಕಡೆಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ
ರಾಜ್ಯದಲ್ಲಿ ಈ ಬಾರಿ ನಾಲ್ಕು ನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದೆ. ಏ. 12 ಮತ್ತು 13ರಂದು ಮೈಸೂರು ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದೆ. ಏಪ್ರಿಲ್ 26 ಮತ್ತು 27ರಂದು ತುಮಕೂರು ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತದೆ. ಮೇ 3 ಮತ್ತು 4 ರಂದು ಬೆಳಗಾವಿ ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದ್ದು, ಮೇ 17 ಮತ್ತು 18 ರಂದು ಮಂಗಳೂರಿನಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದೆ.
Advertisement