
ಕಳೆದ ವರ್ಷ ಟೀಂ ಇಂಡಿಯಾ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿತ್ತು. ಆದರೆ, ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಂಡದ ಫಾರ್ಮ್ ತೃಪ್ತಿಕರವಾಗಿಲ್ಲ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲು ಕಂಡಿದ್ದ ಭಾರತ ತಂಡವು ಮುಂದಿನ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಇಂಗ್ಲೆಂಡ್‌ನಲ್ಲಿ ಆಡುವುದು ಭಾರತಕ್ಕೆ ಕಠಿಣವಾಗಿ ಪರಿಣಮಿಸಲಿದೆ. ಉಭಯ ತಂಡಗಳು ಸಮಬಲ ಹೊಂದಿದ್ದರೂ, ಆತಿಥೇಯರು ಸುಲಭವಾಗಿ ಜಯ ಸಾಧಿಸುತ್ತಾರೆ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಹೇಳಿದ್ದಾರೆ.
'ತವರಿನಲ್ಲಿ ಭಾರತ ಆಡುವುದಕ್ಕೂ ಮತ್ತು ವಿದೇಶದಲ್ಲಿ ಭಾರತ ಆಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಇದು ನಾವು ಸೋಲಿಸಲೇಬೇಕಾದ ತಂಡ ಮತ್ತು ನಾವು ಸೋಲಿಸಬಲ್ಲ ತಂಡ ಎಂದು ನಾನು ಭಾವಿಸುತ್ತೇನೆ. ಇದು ಉತ್ತಮ ಸರಣಿಯಾಗಲಿದೆ' ಎಂದು ಡಕೆಟ್ ಮೇಲ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸುವ ಸವಾಲಿನ ಬಗ್ಗೆ ಮಾತನಾಡಿದ ಡಕೆಟ್, 'ಅದು ಕಠಿಣವಾಗಿದ್ದರೂ, ಬುಮ್ರಾ ಅವರ ಬೌಲಿಂಗ್‌ನಲ್ಲಿ ಅಚ್ಚರಿ ಪಡುವಂತದ್ದು ಏನೂ ಇಲ್ಲ' ಎಂದು ಹೇಳಿದರು.
'ನಾನು ಈ ಹಿಂದೆ ಐದು ಟೆಸ್ಟ್ ಸರಣಿಯಲ್ಲಿ ಅವರನ್ನು ಎದುರಿಸಿದ್ದೇನೆ. ಅವರು ನನಗೆ ಏನು ಮಾಡಲಿದ್ದಾರೆಂದು ನನಗೆ ತಿಳಿದಿದೆ ಮತ್ತು ಒಂದು ಒಳ್ಳೆಯ ವಿಷಯವೆಂದರೆ ಅವರಲ್ಲಿರುವ ಕೌಶಲ್ಯಗಳು ಏನೆಂದು ನನಗೆ ತಿಳಿದಿದೆ. ಹೀಗಾಗಿ, ನನಗೆ ಅಚ್ಚರಿ ಮೂಡಿಸುವಂಥದ್ದೇನೂ ಇರುವುದಿಲ್ಲ ಮತ್ತು ಇದು ಸವಾಲಿನದ್ದಾಗಿರುತ್ತದೆ. ಮೊಹಮ್ಮದ್ ಶಮಿ ಅವರ ರೆಡ್ ಬಾಲ್ ಬೌಲಿಂಗ್ ಕೌಶಲ್ಯಗಳು ಬುಮ್ರಾ ಅವರಂತೆಯೇ ಬೆದರಿಕೆಯೊಡ್ಡುವ ರೀತಿಯಲ್ಲಿರುತ್ತವೆ. ಆದರೆ, ನಾನು ಆ ಆರಂಭಿಕ ಸ್ಪೆಲ್ ಅನ್ನು ಎದುರಿಸಿದರೆ, ಮುಂದೆ ರನ್ ಗಳಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.
ಈಮಧ್ಯೆ, ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲ ಜಯವರ್ಧನೆ ಅವರು ಜಸ್ಪ್ರೀತ್ ಬುಮ್ರಾ ಯಾವಾಗ ಐಪಿಎಲ್‌ಗೆ ಮರಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
ಬೆನ್ನುನೋವಿನಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಟೂರ್ನಿಯ ಕೆಲವು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 'ಜಸ್ಪ್ರೀತ್ ಬುಮ್ರಾ ಎನ್‌ಸಿಎಯಲ್ಲಿದ್ದಾರೆ. ಅವರ ಆಗಮನದ ಬಗ್ಗೆ ನಾವು ಕಾಯಬೇಕಾಗಿದೆ. ಸದ್ಯ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ಅವರು ಉತ್ಸಾಹದಲ್ಲಿದ್ದಾರೆ. ಆದರೆ, ಅವರು ಇಲ್ಲದಿರುವುದು ತಂಡಕ್ಕೆ ಸವಾಲಾಗಿದೆ. ಅವರು ವಿಶ್ವದ ಅತ್ಯುತ್ತಮ ಬೌಲರ್' ಎಂದು ಬುಧವಾರ ಇಲ್ಲಿ ನಡೆದ ಐಪಿಎವ್ ಆವೃತ್ತಿಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಜಯವರ್ಧನೆ ಹೇಳಿದರು.
Advertisement