
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ಎದುರಿಗೆ ಪ್ರಾಬಲ್ಯ ಸಾಧಿಸಿದ್ದ ಕೆಕೆಆರ್ ತವರಿನಲ್ಲೇ ಮುಖಭಂಗ ಅನುಭವಿಸಿದೆ. ಆರ್‌ಸಿಬಿ ಗೆಲುವು ಇದೀಗ ಹಲವಾರು ಮಾಜಿ ಕ್ರಿಕೆಟಿಗರಿಗೆ ತಂಡದ ಮೇಲೆ ಭರವಸೆ ಮೂಡಿಸಿದೆ.
2022 ರಿಂದ 2024 ರವರೆಗೆ ತಂಡವನ್ನು ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಅವರನ್ನು ಐಪಿಎಲ್ ಮೆಗಾ ಆವೃತ್ತಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ನೀಡಲಾಗಿದೆ. 2008ರಿಂದಲೂ ಪ್ರಶಸ್ತಿ ಬರವನ್ನು ಎದುರಿಸುತ್ತಿರುವ ಆರ್‌ಸಿಬಿ ಈ ಬಾರಿ ಉತ್ತಮ ತಂಡವನ್ನು ಕಟ್ಟಿದ್ದು, ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಈ ಆವೃತ್ತಿಯಲ್ಲಿ ಕಣಕ್ಕಿಳಿದಿದೆ. ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಇತ್ತ ಆರ್‌ಸಿಬಿ ಗೆಲುವು ಸಾಧಿಸಿದ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಜತ್ ಪಾಟೀದಾರ್ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ. ರಜತ್ ಪಾಟೀದಾರ್ ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ತಂಡದ ಬೌಲರ್‌ಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲೇ ನಾಯಕತ್ವದ ಜೊತೆಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, 'ಈ ಸಲ ಕಪ್ ನಮ್ದೆ' ಎಂದಿದ್ದಾರೆ. ಆರ್‌ಸಿಬಿ ಈ ಬಾರಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಹೊಂದಿದೆ. ತಂಡದಲ್ಲಿ ಸಮತೋಲನವಿದ್ದು, ಈ ಬಾರಿ ಬಲಿಷ್ಠ ತಂಡವಾಗಿ ಕಾಣಿಸುತ್ತಿದೆ ಎಂದಿದ್ದಾರೆ.
Advertisement