IPL 2025: ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಬೌಲರ್‌ಗೆ ಧೋನಿ ಶ್ಲಾಘನೆ!

ಮುಂಬೈ ಇಂಡಿಯನ್ಸ್ ಪರ ಆಡಿದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿದರು. ಬಲಿಷ್ಠ ಸಿಎಸ್‌ಕೆ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ಎಲ್ಲರನ್ನೂ ದಂಗಾಗುವಂತೆ ಮಾಡಿದರು.
IPL 2025: ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಬೌಲರ್‌ಗೆ ಧೋನಿ ಶ್ಲಾಘನೆ!
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಿದವು. ಮುಂಬೈ ವಿರುದ್ಧ ಚೆನ್ನೈ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಸಿಎಸ್‌ಕೆ ಆವೃತ್ತಿಯ ಶುಭಾರಂಭ ಮಾಡಿತು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.

ಹೈ ವೋಲ್ಟೇಜ್ ಘರ್ಷಣೆಯಲ್ಲಿ, ಸೋಲಿನ ಮೂಲಕ ಮುಂಬೈ ತಂಡವು ಹಿಂದಿನ 12 ಆವೃತ್ತಿಗಳಲ್ಲಿಯೂ ಆರಂಭಿಕ ಪಂದ್ಯದಲ್ಲಿ ಸೋಲು ಕಂಡ ದಾಖಲೆ ಬರೆಯಿತು. 156 ರನ್ ಗುರಿ ಬೆನ್ನತ್ತಿದ ಸಿಎಸ್‌ಕೆ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು. ರಚಿನ್ ರವೀಂದ್ರ 45 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿ ತಂಡಕ್ಕೆ ನೆರವಾದರು.

ಮುಂಬೈ ಇಂಡಿಯನ್ಸ್ ಪರ ಆಡಿದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿದರು. ಬಲಿಷ್ಠ ಸಿಎಸ್‌ಕೆ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ಎಲ್ಲರನ್ನೂ ದಂಗಾಗುವಂತೆ ಮಾಡಿದರು. 24 ವರ್ಷದ ಸ್ಪಿನ್ನರ್ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿದರು.

ಮುಂಬೈ ತಂಡ ಸೋಲು ಕಂಡರೂ, ವಿಘ್ನೇಶ್ ಅವರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಅಪಾರ ಅನುಭವ ಇರುವ ಬೌಲರ್‌ಗಳೇ ಪರದಾಡುತ್ತಿರುವಾಗ ಮೂರು ವಿಕೆಟ್ ಕಬಳಿಸಿ 32 ರನ್ ನೀಡಿ ಮಿಂಚಿದರು. ಸಿಎಸ್‌ಕೆ ಗೆಲುವಿನ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಶುಭಾಶಯ ಕೋರಿದರು. ಈ ವೇಳೆ ಮಾಜಿ ನಾಯಕ ಎಂಎಸ್ ಧೋನಿ, ವಿಘ್ನೇಶ್‌ ಅವರನ್ನು ಶ್ಲಾಘಿಸಿದರು.

ಧೋನಿ ಎಲ್ಲರೊಂದಿಗೆ ಹಸ್ತಲಾಘವ ಮಾಡುತ್ತಿದ್ದಾಗ, ವಿಘ್ನೇಶ್ ಬಂದಾಗ ಅವರ ಬಳಿ ಮಾತನಾಡಿದರು. ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರ ಭುಜ ತಟ್ಟಿ ಹುರಿದುಂಬಿಸಿದರು. ಇದನ್ನು ನೋಡಿದ ಕಮೆಂಟೇಟರ್ ರವಿಶಾಸ್ತ್ರಿ, 'ಯುವ ವಿಘ್ನೇಶ್ ಪುತ್ತೂರ್‌ ಅವರ ಭುಜದ ಮೇಲೆ ಧೋನಿ ತಟ್ಟಿದರು. ಅವರು ಅದನ್ನು ಬಹಳ ಸಮಯದವರೆಗೆ ಮರೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ಹೇಳಿದರು.

ಪಂದ್ಯದ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ವಿಘ್ನೇಶ್ ಅವರ ಅದ್ಭುತ ಸ್ಪೆಲ್ ಅನ್ನು ಹೊಗಳಿದರು ಮತ್ತು ಅಂತಹ ಆಟಗಾರರನ್ನು ಕಂಡುಕೊಂಡ ಮುಂಬೈನ ಸ್ಕೌಟಿಂಗ್ ವಿಭಾಗಕ್ಕೆ ಧನ್ಯವಾದ ಸೂಚಿಸಿದರು.

'ಅದ್ಭುತ, ಮುಂಬೈ ತಂಡವು ಯುವ ಆಟಗಾರರಿಗೆ ಅವಕಾಶಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿದೆ. ಸ್ಕೌಟ್‌ಗಳು ಇದನ್ನು 10 ತಿಂಗಳ ಕಾಲ ಮಾಡುತ್ತಾರೆ ಮತ್ತು ಅವರು (ವಿಘ್ನೇಶ್) ಅದರ ಉತ್ಪನ್ನವಾಗಿದ್ದಾರೆ. ಅವರಿಗೆ 18ನೇ ಓವರ್ ನೀಡುವುದು ಕೂಡ ಯಾವುದೇ ತೊಂದರೆ ಉಂಟುಮಾಡಲಿಲ್ಲ. ಯಾವುದೇ ಇಬ್ಬನಿ ಇರಲಿಲ್ಲ. ಆದರೆ, ಅದು ಜಿಗುಟಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ರುತುರಾಜ್ ಬ್ಯಾಟಿಂಗ್ ಮಾಡಿದ ರೀತಿ ಪಂದ್ಯವನ್ನು ನಮ್ಮಿಂದ ದೂರ ಮಾಡಿತು' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com