
ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಇಂದಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತ್ತು. ಗೆಲ್ಲಲು 244 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿ ಕೇವಲ 11 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಗುಜರಾತ್ ಪರ ಸಾಯಿ ಸುದರ್ಶನ್ 74 ರನ್ ಸಿಡಿಸಿದರೆ, ನಾಯಕ ಶುಭ್ ಮನ್ ಗಿಲ್ 33 ರನ್, ಜಾಸ್ ಬಟ್ಲರ್ 54 ರನ್, ಶೆರ್ಫೇನ್ ರುದರ್ಫೋರ್ಡ್ 46 ರನ್ ಸಿಡಿಸಿ ತಂಡದ ಗೆಲುವಿಗಾಗಿ ಹೋರಾಡಿದರು.
ಆದರೆ ಅಂತಿಮ ಹಂತದಲ್ಲಿ ಪಂಜಾಬ್ ಬೌಲರ್ ಗಳು ಬೌಲಿಂಗ್ ನಲ್ಲಿ ಹಿಡಿತ ಸಾಧಿಸಿ ಮೇಲುಗೈ ಸಾಧಿಸಿ ಗೆಲುವಿಗೆ ಕಾರಣರಾದರು. ಅಂತಿಮ ಓವರ್ ನಲ್ಲಿ ಗೆಲ್ಲಲು ಗುಜರಾತ್ ಗೆ 27 ರನ್ ಗಳ ಅವಶ್ಯಕತೆ ಇದ್ದಾಗ ಅಂತಿಮ ಓವರ್ ಎಸೆದ ಅರ್ಶ್ ದೀಪ್ ಸಿಂಗ್ ಕೇವಲ 15 ರನ್ ನೀಡಿ ಒಂದು ವಿಕೆಟ್ ಪಡೆದು ಪಂಜಾಬ್ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು.
ಸಿಕ್ಸರ್ ಗಳ ಸುರಿಮಳೆ
ಇನ್ನು ಇಂದು ಗುಜರಾತ್ ತಂಡ ಬರೊಬ್ಬರಿ 16 ಸಿಕ್ಸರ್ ಗಳನ್ನು ಸಿಡಿಸಿದ್ದು, ಇದು ಐಪಿಎಲ್ ಪಂದ್ಯವೊಂದರಲ್ಲಿ ಗುಜರಾತ್ ಗಳಿಸಿದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆಯಾಗಿದೆ. ಈ ಹಿಂದೆ 2023ರಲ್ಲಿ ಅವರು ಲಕ್ನೋ ವಿರುದ್ಧ 14 ಸಿಕ್ಸರ್ ಗಳನ್ನು ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಗುಜರಾತ್ ಹಿಂದಿಕ್ಕಿದೆ.
ಚೇಸಿಂಗ್ ರನ್ ದಾಖಲೆ
ಅಂತೆಯೇ ಇಂದು ಗುಜರಾತ್ ಕಲೆಹಾಕಿದ 232 ರನ್ ಗಳು ಐಪಿಎಲ್ ಇತಿಹಾಸದಲ್ಲೇ ಚೇಸಿಂಗ್ ವೇಳೆ ಬಂದ 2ನೇ ಗರಿಷ್ಛ ರನ್ ಗಳಿಕೆಯಾಗಿದೆ. ಈ ಹಿಂದೆ 2023ರಲ್ಲಿ ಇದೇ ಅಹಮದಾಬಾದ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅವರು 233/3 ರನ್ ಗಳಿಸಿದ್ದರು.
Advertisement