
ವಿಶಾಖಪಟ್ಟಣಂ: ಐಪಿಎಲ್ ಟೂರ್ನಿಯ ನಿನ್ನೆಯ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ವಿರೋಚಿತ ಗೆಲುವು ದಾಖಲಿಸಿತು. ಈ ರೋಚಕ ಪಂದ್ಯದ ನಡುವೆಯೂ LSG ನಾಯಕ ತಮ್ಮ ಹಾಸ್ಯಪ್ರವೃತ್ತಿ ಮೂಲಕ ಮತ್ತೆ ಪ್ರೇಕ್ಷಕರನ್ನು ನಕ್ಕುನಗಿಸಿದ್ದಾರೆ.
ನಿನ್ನೆ ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ನೀಡಿದ್ದ 210 ರನ್ ಗಳ ಗುರಿಯನ್ನು ಡೆಲ್ಲಿ ತಂಡ 19.3 ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ವಿರೋಚಿತ ಗೆಲುವು ಸಾಧಿಸಿತು. ಡೆಲ್ಲಿ ತಂಡದ ಆಶುತೋಷ್ ಭರ್ಜರಿ ಬ್ಯಾಟಿಂಗ್ ಡೆಲ್ಲಿ ತಂಡದ ಗೆಲುವಿಗೆ ಕಾರಣವಾಯಿತು.
ಪಂದ್ಯ ಪ್ರತೀ ಓವರ್ ಗೂ ಗೆಲವು ಯಾರಿಗೆ ಎಂಬ ಪ್ರಶ್ನೆ ಮೂಡಿಸುತ್ತಿತ್ತು. ಆದರೆ ಇಷ್ಟು ಗಂಭೀರವಾಗಿದ್ದ ಪಂದ್ಯದ ನಡುವೆಯೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದು ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್. ಡೆಲ್ಲಿ ಬ್ಯಾಟಿಂಗ್ ವೇಳೆ ರಿಷಬ್ ಪಂತ್ ಎದುರಾಳಿ ತಂಡದಲ್ಲಿದ್ದ ತಮ್ಮ ಸ್ನೇಹಿತ ಆಟಗಾರರನ್ನು ಆಗಾಗ ಕೀಟಲೆ ಮಾಡುತ್ತಲೇ ಇದ್ದರು. ಪ್ರಮುಖವಾಗಿ ಕುಲದೀಪ್ ಯಾದವ್ ಬ್ಯಾಟಿಂಗ್ ಮಾಡುವಾಗ ಅವರನ್ನು ಕೆಣಕುತ್ತಿದ್ದರು.
ಕ್ರೀಸ್ ಬಿಟ್ಟು ಹೋಗೋ ಮುಂದೆ
ಇನ್ನು ಪಂದ್ಯದ 18ನೇ ಓವರ್ ಆರಂಭದಲ್ಲಿ ಎಂಟನೇ ವಿಕೆಟ್ ಕಳೆದುಕೊಂಡು ಡೆಲ್ಲಿ ತಂಡ ಕೇವಲ 17 ಎಸೆತಗಳಲ್ಲಿ ಗೆಲ್ಲಲು 39 ರನ್ ಗಳಿಸಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಇದು ಸವಾಲಿನ ಕೆಲಸವಾಗಿತ್ತು. ಆದರೆ ಮತ್ತೊಂದು ತುದಿಯಲ್ಲಿ ಆಶುತೋಶ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಪರಿಣಾಮವಾಗಿ, ಕುಲದೀಪ್ ಯಾದವ್ ಕ್ರೀಸ್‌ಗೆ ಬಂದಾಗ, ರಿಷಬ್ ಪಂತ್ ಎಂದಿನ ತಮ್ಮ ಹಾಸ್ಯ ಪ್ರವೃತ್ತಿಯೊಂದಿಗೆ ಅವರನ್ನು ಕೆಣಕಿದರು. ಆದರೆ ಕುಲದೀಪ್ ಯಾದವ್ ಮಾತ್ರ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.
ಪಂದ್ಯದ 18ನೇ ಓವರ್‌ನ ಎರಡನೇ ಎಸೆತದಲ್ಲಿ ರವಿ ಬಿಷ್ಣೋಯ್ ಫ್ಲಾಟ್ ಎಸೆತವನ್ನು ಕುಲದೀಪ್ ಯಾದವ್ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಈ ವೇಳೆ ಚೆಂಡು ಕುಲದೀಪ್ ಯಾದವ್ ರ ಬ್ಯಾಟ್ ವಂಚಿಸಿ ಕೀಪರ್ ರಿಷಬ್ ಪಂತ್ ಕೈ ಸೇರಿತ್ತು. ಆದರೆ ಕುಲದೀಪ್ ಯಾದವ್ ಕ್ರೀಸ್ ನಲ್ಲೇ ಇದ್ದಿದ್ದರಿಂದ ರಿಷಬ್ ಪಂತ್ ಗೆ ಸ್ಟಂಪ್ ಔಟ್ ಮಾಡುವ ಅವಕಾಶ ಸಿಗಲಿಲ್ಲ. ಈ ವೇಳೆ ಕ್ರೀಸ್ ನಲ್ಲಿದ್ದ ಕುಲದೀಪ್ ಯಾದವ್ ರನ್ನು ರಿಷಬ್ ಪಂತ್ ಮುಂದೆ ಹೋಗೋ ಎಂಬಂತೆ ತಳ್ಳಿ ಬೇಲ್ಸ್ ಎಗರಿಸಿದರು. ಈ ಘಟನೆ ಕಂಡ ಪ್ರೇಕ್ಷಕರು, ಆಟಗಾರರು ಮಾತ್ರವಲ್ಲದೇ ಸ್ವತಃ ಅಂಪೈರ್ ಗಳು ಕೂಡ ನಗೆಗಡಲಲ್ಲಿ ತೇಲಿದರು.
Advertisement