
ನವದೆಹಲಿ: ಐಪಿಎಲ್ 2025ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಣಸಲಿದ್ದು, ಈ ಪಂದ್ಯಕ್ಕೂ ಮುನ್ನ ಶನಿವಾರ ವಿಶಾಖಪಟ್ಟಣದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ದಂಪತಿ ಮಾರ್ಚ್ 24ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಕಾರಣದಿಂದಾಗಿ ಕಳೆದ ವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯದಿಂದ ರಾಹುಲ್ ಹೊರಗುಳಿದಿದ್ದರು.
'X'ನಲ್ಲಿ ರಾಹುಲ್ ಆಗಮನದ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ಹಂಚಿಕೊಂಡಿದ್ದು, 'ನೀವು ಪ್ರೀತಿಸಲ್ಪಟ್ಟಿದ್ದೀರಿ. ನೀವು ನಮ್ಮವರು. ನೀವು ಮನೆಗೆ ಬಂದಿದ್ದೀರಿ. ಕೆಎಲ್ಆರ್, ದಿಲ್ಲಿಗೆ ಸ್ವಾಗತ' ಎಂದು ಬರೆದಿದೆ.
ಮತ್ತೊಂದು ಪೋಸ್ಟ್‌ನಲ್ಲಿ, ಫ್ರಾಂಚೈಸಿಯು ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಜೆರ್ಸಿಯಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದು, 'ಆಟಗಳು ಪ್ರಾರಂಭವಾಗಲಿ' ಎಂಬ ಶೀರ್ಷಿಕೆಯನ್ನು ನೀಡಿದೆ.
ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ 14 ಕೋಟಿ ರೂ.ಗೆ ಫ್ರಾಂಚೈಸಿ ಖರೀದಿಸಿದ ನಂತರ ರಾಹುಲ್ ಭಾನುವಾರ ವಿಶಾಖಪಟ್ಟಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಕಳೆದ ವಾರ ರಾಹುಲ್ ಅನುಪಸ್ಥಿತಿಯಲ್ಲಿ ನಡೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ನೇತೃತ್ವದ ತಂಡವು ಲಕ್ನೋ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಪಂದ್ಯಾವಳಿಯನ್ನು ಶುಭಾರಂಭ ಮಾಡಿತ್ತು.
ದೆಹಲಿ ಪ್ರಾಂಚೈಸಿ ಬಗ್ಗೆ ಮಾತನಾಡಿದ ರಾಹುಲ್, 'ಇದು ನನಗೆ ಹೊಸ ಅನುಭವ. ಇದು ನನ್ನ ನಾಲ್ಕನೇ ಅಥವಾ ಐದನೇ ಐಪಿಎಲ್ ಫ್ರಾಂಚೈಸಿಯಾಗಿದೆ. ಇದು ರೋಮಾಂಚಕಾರಿಯಾಗಿದೆ. ಪ್ರತಿ ಹೊಸ ತಂಡವು ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ, ನಿರ್ವಹಣೆ ಹೇಗಿರುತ್ತದೆ ಮತ್ತು ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಅನಿಶ್ಚಿತತೆಗಳನ್ನು ತರುತ್ತದೆ. ಆದರೆ, ನಮ್ಮ ತಂಡ ಮತ್ತು ನಿರ್ವಹಣೆಯನ್ನು ನೋಡಿದರೆ, ನಾವು ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಂತೆ ತೋರುತ್ತದೆ' ಎಂದು ಹೇಳಿದರು.
'ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳ ಉತ್ತಮ ಮಿಶ್ರಣವಿದೆ. ನಾನು ಕೆಲವು ಅದ್ಭುತ ಕೌಶಲ್ಯಪೂರ್ಣ ಯುವಕರೊಂದಿಗೆ ಆಡಲು ಮತ್ತು ಅವರಿಂದ ಕಲಿಯಲು ಉತ್ಸುಕನಾಗಿದ್ದೇನೆ. ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರೊಂದಿಗೆ ನಾನು ಈ ಮೊದಲು ಆಡಿದ್ದೇನೆ. ನಾವು ಬಲಿಷ್ಠ ತಂಡವನ್ನು ಹೊಂದಿದ್ದೇವೆ' ಎಂದಿದ್ದರು.
ತಾವು ಆಡಿರುವ 132 ಐಪಿಎಲ್ ಪಂದ್ಯಗಳಲ್ಲಿ ರಾಹುಲ್ 45.47 ರ ಸರಾಸರಿಯಲ್ಲಿ 4,683 ರನ್ ಗಳಿಸಿದ್ದಾರೆ. 2013ರಲ್ಲಿ ಪದಾರ್ಪಣೆ ಮಾಡಿದ ನಂತರ ಅವರು ಟೂರ್ನಿಯಲ್ಲಿ ನಾಲ್ಕು ಶತಕಗಳು ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.
Advertisement