
ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ನ ಸ್ಪಿನ್ ದಂತಕಥೆ ಶೇನ್ ವಾರ್ನ್ (Shane Warne) ಸಾವಿನಲ್ಲಿ "Powerful'' ವ್ಯಕ್ತಿಯ ಕೈವಾಡವಿದೆ ಎಂದು ಆಸ್ಟ್ರೇಲಿಯಾ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಶೇನ್ ವಾರ್ನ್ ಸಾವಿನ ಸ್ಥಳದ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಕೆಲವು ಪ್ರಭಾವಶಾಲಿ ಹಿರಿಯ ವ್ಯಕ್ತಿಗಳ ಆದೇಶದ ಮೇರೆಗೆ ವಿವಾದಾತ್ಮಕ ವಸ್ತುವನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
3 ವರ್ಷಗಳ ಹಿಂದೆ ಥೈಲಾಂಡ್ ನ ಕೊಹ್ ಸಮುಯಿ ದ್ವೀಪದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ದೇಹ ಶವವಾಗಿ ದೊರೆತಿತ್ತು. ಪ್ರಾಥಮಿಕ ತನಿಖೆಯಲ್ಲಿ ಶೇನ್ ವಾರ್ನ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಈ ಘಟನೆ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬೀಳುವಂತೆ ಮಾಡಿತ್ತು.
ಇದೀಗ ಶೇನ್ ವಾರ್ನ್ ನಿಗೂಢ ಸಾವಿನ ತನಿಖೆಯಲ್ಲಿ ಭಾಗಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದು, ಶೇನ್ ವಾರ್ನ್ ಸಾವಿನ ಪ್ರಕರಣದಲ್ಲಿ "Powerful'' ಕೈವಾಡವಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಡೈಲಿ ಮೇಲ್ ವರದಿ ಮಾಡಿದ್ದು, ಶೇನ್ ವಾರ್ನ್ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಸಿಕ್ಕ ವಸ್ತುಗಳ ಕುರಿತು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಹೇಳಿದೆ. ಇದು ಶೇನ್ ವಾರ್ನ್ ಸಾವಿನ ರಹಸ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆ ಇದೀಗ ಅನುಮಾನಗಳು ಹುಟ್ಟಿಕೊಂಡಿವೆ.
ವರದಿಯಲ್ಲೇನಿದೆ?
ಶೇನ್ ವಾರ್ನ್ ಉಳಿದುಕೊಂಡಿದ್ದ ಕೋಣೆಯಲ್ಲಿ ಲೈಂಗಿಕ ಮಾದಕ ವಸ್ತು ದೊರೆತಿದೆ ಎಂಬ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಅಲ್ಲದೆ ಶೇನ್ ವಾರ್ನ್ ಸಾವಿಗೀಡಾಗಿದ್ದ ಕೋಣೆಯಲ್ಲಿ ಸಿಕ್ಕ ಮಾತ್ರೆಗಳ ಬಾಟಲಿಯನ್ನು ಯಾರಿಗೂ ತಿಳಿಯದಂತೆ ಎತ್ತಿಡಲು ಮತ್ತು ಸಾಕ್ಷ್ಯ ನಾಶಪಡಿಸಲು ಆದೇಶಿಸಲಾಗಿತ್ತು ಎಂದು ಅಧಿಕಾರಿ ಆರೋಪಿಸಿದ್ದಾರೆ.
ಕೋಣೆಯಲ್ಲಿ ಸಿಕ್ಕಿದ್ದೇನು?
ವರದಿಯ ಪ್ರಕಾರ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ವಾರ್ನ್ ಮೃತಪಟ್ಟಿದ್ದ ಕೋಣೆಯಿಂದ 'ಕಾಮಾಗ್ರ' ಮಾತ್ರೆಗಳ ಬಾಟಲಿಯನ್ನು ತೆಗೆದು ಹಾಕಲು ಆದೇಶಿಸಲಾಗಿತ್ತು. ಇದನ್ನು ನಾನು ಕೋಣೆಯಿಂದ ಸಂಗ್ರಹಿಸಿದಾಗ ಹಿರಿಯ ಅಧಿಕಾರಿಗಳು ಮಾತ್ರೆಗಳ ಬಾಟಲಿಯನ್ನು ಬಹಿರಂಗಪಡಿಸದಂತೆ ಆದೇಶಿಸಿದರು. ಈ ತಿರುಚುವಿಕೆಯಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಭಾಗಿಯಾಗಿರಬಹುದು ಎಂದು ಆ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ನಮ್ಮ ಹಿರಿಯ ಅಧಿಕಾರಿಗಳು ಬಾಟಲಿಯನ್ನು ವಿಲೇವಾರಿ ಮಾಡಲು ನಮಗೆ ಆದೇಶಿಸಿದರು. ಈ ಆದೇಶಗಳು ಮೇಲಿನಿಂದ ಬರುತ್ತಿದ್ದವು, ಮತ್ತು ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ತಮ್ಮ ರಾಷ್ಟ್ರೀಯ ಐಕಾನ್ ನ ಈ ರೀತಿಯ ದುರಂತ ಸಾವನ್ನು ಬಯಸಿರಲಿಲ್ಲ. ಹೀಗಾಗಿ ಅವರಿಗೆ ಹೃದಯಾಘಾತವಾಗಿತ್ತು ಎಂದು ಸಾವಿನ ಸಂದರ್ಭದಲ್ಲಿ ವರದಿಯಾಗಿತ್ತು.
ಅದಕ್ಕೆ ಕಾರಣ ಎನು ಎಂಬ ಬಗ್ಗೆ ಬೇರೆ ಯಾವುದೇ ವಿವರಗಳನ್ನು ನೀಡಿರಲಿಲ್ಲ. 'ಕಾಮಾಗ್ರ’' ಒಂದು ಸೂಕ್ಷ್ಮ ವಿಷಯವಾಗಿರುವುದರಿಂದ ಅದನ್ನು ದೃಢೀಕರಿಸಲು ಯಾರೂ ಮುಂದೆ ಬರುವುದಿಲ್ಲ. ಇದೆಲ್ಲದರ ಹಿಂದೆ ಹಲವಾರು ಶಕ್ತಿಶಾಲಿ, ಅದೃಶ್ಯ ಕೈಗಳಿದ್ದವು" ಎಂದು ಅವರು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಂತೆಯೇ ಶೇನ್ ವಾರ್ನ್ ಎಷ್ಟು ಮಾತ್ರೆಗಳನ್ನು ತೆಗೆದುಕೊಂಡನೆಂದು ನಮಗೆ ತಿಳಿದಿಲ್ಲ. ಘಟನಾ ಸ್ಥಳದಲ್ಲಿ ವಾಂತಿ ಮತ್ತು ರಕ್ತವೂ ಬಿದ್ದಿತ್ತು. ಆದರೆ ನಮಗೆ ಬಂದ ಆದೇಶದಂತೆ ನಾವು ಕಾಮಗ್ರಾವನ್ನು ತೆರವುಗೊಳಿಸಿದೆವು" ಎಂದು ಹೇಳಿದ್ದಾರೆ.
ಏನಿದು 'ಕಾಮಾಗ್ರ'?
ಕಾಮಾಗ್ರ ಎಂಬ ಹೆಸರಿನ ಈ ಮಾತ್ರೆಯನ್ನು ನಿಮಿರುವಿಕೆಯ ದೌರ್ಬಲ್ಯಕ್ಕೆ ಬಳಸುತ್ತಾರೆ. ಒಂದು ವೇಳೆ ಜನ್ಮಜಾತ ಹೃದಯ ದೌರ್ಬಲ್ಯ ಹೊಂದಿರುವವರು ಇದನ್ನು ಬಳಸಿದರೆ ಕಂಟಕವಾಗುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಲಾಗುತ್ತಿದೆ. ಈ ಔಷಧವು ವಯಾಗ್ರದಲ್ಲಿ ಕಂಡುಬರುವ ಸಿಲ್ಡೆನಾಫಿಲ್ ಸಿಟ್ರೇಟ್ ಅನ್ನು ಒಳಗೊಂಡಿದೆ.
ಥೈಲ್ಯಾಂಡ್ ನಲ್ಲಿ ನಿಷೇಧಿತ ಡ್ರಗ್
ಕಾಮೋತ್ತೇಜಕ ಡ್ರಗ್ಸ್ ಕಾಮಾಗ್ರ ಥೈಲ್ಯಾಂಡ್‌ನಲ್ಲಿ ನಿಷೇಧಿಸಲಾಗಿದೆ. ಹಾಗಿದ್ದೂ ಶೇನ್ ವಾರ್ನ್ ಗೆ ಹೇಗೆ ಈ ವಸ್ತು ಲಭ್ಯವಾಯಿತು ಎಂಬುದು ಸಹ ಈವರೆಗೂ ಬಗೆಹರಿಯದ ಮತ್ತೊಂದು ಪ್ರಶ್ನೆಯಾಗಿದೆ.
ಏನಿದು ಪ್ರಕರಣ?
ಥಾಯ್ಲೆಂಡಿನ ಕೊಹ್ ಸಮುಯಿ ದ್ವೀಪದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದ ಶೇನ್ ವಾರ್ನ್ ಅವರ ಮೃತದೇಹ ಮಾರ್ಚ್ 4, 2022 ರಂದು ದೊರೆತಿತ್ತು. ಶವಪರೀಕ್ಷೆಯ ವರದಿಯಲ್ಲಿಯು ಸಹ ವಾರ್ನ್ ಅವರದ್ದು ಸಹಜ ಸಾವು ಎಂದು ತಿಳಿದುಬಂತು. ನಂತರ ಆಸ್ಟ್ರೇಲಿಯಾ ಸರ್ಕಾರವು ಅವರ ದೇಹವನ್ನು ಆಸ್ಟ್ರೇಲಿಯಾಕ್ಕೆ ತರಲು ಕ್ರಮ ಕೈಗೊಂಡು ಮಾರ್ಚ್ 30, 2022 ರಂದು ಮೆಲ್ಬೋರ್ನ್ ಗೆ ಪಾರ್ಥೀವ ಶರೀರ ಬಂದಿತ್ತು. ಥಾಯ್ಲೆಂಡ್ ನಿಂದ ಖಾಸಗಿ ವಿಮಾನವನ್ನು ಆಸ್ಟ್ರೇಲಿಯಾಗೆ ತಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು.
Advertisement