
2025ರ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಎಂಎಸ್ ಧೋನಿಗೆ ಉತ್ತಮವಾಗಿ ಕಾಣುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ವಿರುದ್ಧದ ಸೋಲು ಸಿಎಸ್ ಕೆ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ಇಷ್ಟು ದಿನ ಧೋನಿಯನ್ನು ತಲೆ ಮೇಲೆ ಕೂರಿಸಿಕೊಂಡು ಸುತ್ತುತ್ತಿದ್ದ ಅಭಿಮಾನಿಗಳು ಇದೀಗ ಧೋನಿ ತಂಡ ಬಿಟ್ಟು ಹೋದರೆ ಸಾಕಪ್ಪ ಅನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಈ ವಿಡಿಯೋಗಳೇ ಸಾಕ್ಷಿಯಂತಿದೆ.
ಹೌದು... ಸಿಎಸ್ ಕೆ ಅಭಿಮಾನಿಯೊಬ್ಬರು ಕ್ರೀಡಾಂಗಣದ ಹೊರಗೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಆ ಅಭಿಮಾನಿ ನೇರವಾಗಿ ಧೋನಿಯನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಧೋನಿ ದೊಡ್ಡ ಫಿನಿಶರ್ ಎಂದು ಹೇಳುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿದೆ ಧೋನಿ ಬ್ಯಾಟಿಂಗ್. ಧೋನಿ ಉತ್ತಮ ಫಿನಿಶರ್ ಆಗಬೇಕಾದರೆ ಅವರು ಪಂದ್ಯ ಇನ್ನೇನು ಕೈಬಿಟ್ಟು ಹೋಗುತ್ತಿದೆ ಅನ್ನುವ ಸಮಯದಲ್ಲಿ ಬರಬೇಕು. ಅಂದರೆ 13 ಅಥವಾ 14ನೇ ಓವರ್ ಸಮಯದಲ್ಲಿ ಆದರೆ ಧೋನಿ 8 ಅಥವಾ 9ನೇ ಕ್ರಮಾಂಕದಲ್ಲಿ ಬರುತ್ತಾರೆ. ಒಂದೆರೆಡು ಬೌಂಡರಿ.. ಸಿಕ್ಸರ್ ಬಾರಿಸಿದರೆ ಸಾಕು ಅಭಿಮಾನಿಗಳು ತಲಾ ತಲಾ ಎಂದು ಕೂಗಿ ಖುಷಿ ಪಡುತ್ತಾರೆ ಅಷ್ಟೇ. ಅದರಿಂದ ಏನು ಪ್ರಯೋಜನ ತಂಡ ನಿರಂತರವಾಗಿ ಸೋಲುತ್ತಿದೆ ಎಂದು ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ನಿಲ್ಲದ ಅಭಿಮಾನಿಯ ಮಾತುಗಳು... ಸಾಕಪ್ಪ ಸಾಕಾಯ್ತು. ಈ ವರ್ಷವೇ ತಂಡವನ್ನು ಬಿಟ್ಟು ಹೋದರೆ ಒಳ್ಳೆಯದ್ದು ಇನ್ನೆಷ್ಟು ವರ್ಷ ನಾವು ಮುಠಾಳರಾಗಬೇಕು ಎಂದು ನೇರವಾಗಿ ಧೋನಿಗೆ ತಿವಿದಂತೆ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಧೋನಿ ಬೆನ್ನಿಗೆ ನಿಂತು ಮಾತನಾಡಿದ್ದರೆ ಕೆಲವು ಧೋನಿ ಬಿಟ್ಟು ಹೋದರೆ ಸಾಕು ಎನ್ನುವ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಐಪಿಎಲ್ 2025ರಲ್ಲಿ ಮೂರು ಪಂದ್ಯಗಳನ್ನು ಆಡುವ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರದ ಆರ್ ಸಿಬಿ ವಿರುದ್ಧ 50 ರನ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ 6 ರನ್ ಗಳಿಗೆ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
Advertisement