
ಧರ್ಮಶಾಲಾ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಿಂದಾಗಿ ಅರ್ಧಕ್ಕೇ ಸ್ಥಗಿತವಾಗಿದ್ದ ಐಪಿಎಲ್ ಟೂರ್ನಿ ಮತ್ತೆ ಪುನಾರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು ಈ ನಡುವೆ ಧರ್ಮಶಾಲಾದಲ್ಲಿ ಸ್ಥಗಿತವಾಗಿದ್ದ ಪಂಜಾಬ್ vs ಡೆಲ್ಲಿ ಪಂದ್ಯವನ್ನು ಕೂಡ ಪುನಾರಂಭಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಹೌದು... ಪಹಲ್ಗಾಮ್ ಉಗ್ರದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಸೇನಾ ಸಂಘರ್ಷ ಕದನ ವಿರಾಮ ಘೋಷಣೆಯೊಂದಿಗೆ ಮೆತ್ತಗಾಗಿದೆ. ಉಭಯ ದೇಶಗಳ ಗಡಿಗಳಲ್ಲಿ ಇದೀಗ ಬಾಂಬ್ ಸ್ಫೋಟ, ಗುಂಡಿನ ಮೊರೆತ, ಡ್ರೋನ್ ಹಾರಾಟ ಸ್ಥಗಿತವಾಗಿದೆ.
ಏತನ್ಮಧ್ಯೆ ಸ್ಥಗಿತವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮುಂದಿನ ವಾರ ಮರು ನಿಗದಿಯಾಗುವ ಸಾಧ್ಯತೆಯಿದೆ. ಈಗಾಗಲೇ ಐಪಿಎಲ್ ಆಡಳಿತ ಮಂಡಳಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಐಪಿಎಲ್ ಟೂರ್ನಿ ಪುನಾರಂಭಿಸುವ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಅದು ಕೂಡ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ನಡುವಣ ಪಂದ್ಯದೊಂದಿಗೆ ಎಂದು ವರದಿಯಾಗಿದೆ.
ಅಂದರೆ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡವು 10.1 ಓವರ್ಗಳಲ್ಲಿ 122 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇದೀಗ ಟೂರ್ನಿಯನ್ನು ಮುಂದಿನ ವಾರ ಪ್ರಾರಂಭಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇತ್ತ ಭೀತಿಯ ಕಾರಣ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಸ್ಥಗಿತಗೊಳಿಸಿರುವ ಕಾರಣ ಈ ಮ್ಯಾಚ್ ಅನ್ನು ಪುನಃ ಆಯೋಜಿಸಲು ಚಿಂತಿಸಲಾಗಿದೆ ಎಂದು ವರದಿಯಾಗಿದೆ.
ಅದರಂತೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಮರು ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಈ ಪಂದ್ಯದೊಂದಿಗೆ ಐಪಿಎಲ್ಗೆ ಮತ್ತೆ ಚಾಲನೆ ದೊರೆಯಲಿದೆ. ಈ ಮೂಲಕ ಲೀಗ್ ಹಂತದಲ್ಲಿ 13 ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಇನ್ನುಳಿದ 4 ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಕೂಡ ಬದಲಾಗಲಿದೆ.
ಟೂರ್ನಿ ಯಾವಾಗ ಶುರು?
ಭಾರತದಲ್ಲಿ ಇನ್ನಷ್ಟು ಪರಿಸ್ಥಿತಿಯು ಸಹಜತೆಗೆ ಮರಳಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯವು ಮುಂದಿನ ವಾರದಿಂದ ಶುರುವಾಗಲಿದೆ. ಇಲ್ಲದಿದ್ದರೆ, ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಬಹುದು. ಅಂದರೆ ಯುಎಇ ಅಥವಾ ಸೌತ್ ಆಫ್ರಿಕಾದಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸಬಹುದು.
ಈ ಹಿಂದೆ 2020 ರಲ್ಲಿ ಮತ್ತು 2021 ರಲ್ಲಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2009 ರಲ್ಲಿ ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ನಿಮ್ಮಿತ್ತ ಟೂರ್ನಿಯ ಕೆಲ ಪಂದ್ಯಗಳನ್ನು ಸೌತ್ ಆಫ್ರಿಕಾದಲ್ಲಿ ನಡೆಸಲಾಗಿತ್ತು.
ಇದೀಗ ಐಪಿಎಲ್ನ ಕೊನೆಯ ಹಂತದ ಪಂದ್ಯಗಳು ಮಾತ್ರ ಬಾಕಿಯಿವೆ. ಹೀಗಾಗಿ ಮುಂದಿನ ವಾರದಲ್ಲಿ ಟೂರ್ನಿಯನ್ನು ಎಲ್ಲಿ ಆಯೋಜಿಸಬೇಕೆಂಬುದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಭಾರತ ಮತ್ತು ಪಾಕ್ ನಡುವಣ ಉದ್ವಿಗ್ನತೆ ಕೊನೆಗೊಂಡರೆ, ಟೂರ್ನಿಯು ಭಾರತದಲ್ಲೇ ಜರುಗಲಿದ್ದು, ಇಲ್ಲದಿದ್ದರೆ ಯುಎಇ ಅಥವಾ ಸೌತ್ ಆಫ್ರಿಕಾದಲ್ಲಿ ಐಪಿಎಲ್ನ ಕೊನೆಯ ಹಂತದ ಪಂದ್ಯಗಳು ನಡೆಯಲಿದೆ.
Advertisement