India vs Pakistan war: 'ಇನ್ಯಾವತ್ತೂ ಪಾಕಿಸ್ತಾನಕ್ಕೆ ಬರಲ್ಲ'; PSL ಆಡಲು ಹೋಗಿದ್ದ ವಿದೇಶಿ ಆಟಗಾರ ಗಳಗಳನೆ ಕಣ್ಣೀರು!
ಇಸ್ಲಾಮಾಬಾದ್: ಐಪಿಎಲ್ ನಲ್ಲಿ ಅವಕಾಶ ಸಿಗದೇ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲು ಹೋಗಿದ್ದ ವಿದೇಶಿ ಕ್ರಿಕೆಟಿಗರಿಗೆ ಪಾಕಿಸ್ತಾನದಲ್ಲಿ ಕರಾಳ ಅನುಭವ ಎದುರಾಗಿದ್ದು, ಇನ್ನೆಂದೂ ಪಾಕಿಸ್ತಾನಕ್ಕೆ ಬರಲ್ಲ ಎಂದು ಆಟಗಾರನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದ ವಿಚಾರ ಇದೀಗ ಬಯಲಿಗೆ ಬಂದಿದೆ.
ಪಹಲ್ಗಾಮ್ ಉಗ್ರದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಸೇನಾ ಸಂಘರ್ಷ ಕೇವಲ ಉಭಯ ದೇಶಗಳ ನಾಗರಿಕರು ಮಾತ್ರವಲ್ಲದೇ ವಿದೇಶಿ ಕ್ರಿಕೆಟಿಗರನ್ನೂ ಕೂಡ ಕಾಡಿತ್ತು. ಪ್ರಮುಖವಾಗಿ ಪಿಎಸ್ಎಲ್ ಆಡಲು ಪಾಕಿಸ್ತಾನಕ್ಕೆ ಹೋಗಿದ್ದ ವಿದೇಶಿ ಕ್ರಿಕೆಟಿಗರು ಕರಾಳ ಅನುಭವದೊಂದಿಗೆ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟಿಗ ಬಿಚ್ಚಿಟ್ಟ ಕರಾಳತೆ
ಇನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಏರ್ಪಟ್ಟಿದ್ದಾಗ ಪಾಕಿಸ್ತಾನ ಸೂಪರ್ ಲೀಗ್ 2025 ಟೂರ್ನಿ ಆಡುತ್ತಿದ್ದ ವಿದೇಶಿ ಆಟಗಾರರ ಪರಿಸ್ಥಿತಿ ಮತ್ತು ಮನಸ್ಥಿತಿ ಹೇಗಿತ್ತು ಎಂಬ ಬಗ್ಗೆ ಇದೀಗ ಬಾಂಗ್ಲಾದೇಶದ ಲೆಗೆ ಸ್ಪಿನ್ನರ್ ರಿಷಾದ್ ಹುಸೇನ್ ತಮಗಾದ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ವಿದೇಶಿ ಆಟಗಾರರಾದ ಸ್ಯಾಮ್ ಬಿಲ್ಲಿಂಗ್ಸ್, ಡೇರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೀಸೆ ಮತ್ತು ಟಾಮ್ ಕರ್ರನ್ ಸೇರಿದಂತೆ ಅನೇಕ ಬಹುತೇಕ ವಿದೇಶಿ ಆಟಗಾರರು ಪಾಕಿಸ್ತಾನದಿಂದ ಹೊರಡುವ ವೇಳೆ ಭಯಭೀತರಾಗಿದ್ದು ಅನೇಕ ಆಟಗಾರರು ಮರಳಿ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತಿದ್ದ ಟಾಮ್ ಕರನ್
ದುಬೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಷಾದ್ ಹುಸೇನ್, ವಿದೇಶಿ ಆಟಗಾರರು ಪಾಕಿಸ್ತಾನದಿಂದ ಹೊರಡುವ ವೇಳೆ ಬಹಳ ಭಯಭೀತರಾಗಿದ್ದರು ಎಂದು ತಿಳಿಸಿದ್ದರು. ಇಂಗ್ಲೆಂಡ್ ನ ಟಾಮ್ ಕರನ್ ಎಂಬ ಆಟಗಾರ ವಿಮಾನ ನಿಲ್ದಾಣ ಮುಚ್ಚಿದ್ದ ಕಾರಣ ಅತ್ತರು.
ಪಿಎಸ್ಎಲ್ ಮುಂದೂಡಲ್ಪಟ್ಟ ಕಾರಣ ತಮ್ಮ ದೇಶಕ್ಕೆ ಮರಳಲು ವಿಮಾನ ಹಿಡಿಯಪ ಸಲುವಾಗಿ ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಕರ್ರನ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಆದರೆ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿದೆ ಎಂಬುದನ್ನು ತಿಳಿದು ಸಣ್ಣ ಮಗುವಿನಂತೆ ಅಳಲು ಪ್ರಾರಂಭಿಸಿದರು. ಸ್ಥಳದಲ್ಲಿದ್ದ ಇಬ್ಬರು ಮೂವರು ಸೇರಿ ಅವರನ್ನು ಸಮಾಧಾನಪಡಿಸಬೇಕಾಯಿತು ಎಂದು ರಿಷಾದ್ ಹುಸೇನ್ ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಕ್ಷಿಪಣಿ ಅಪ್ಪಳಿಸಿತ್ತು
ನಾವು ದುಬೈನಲ್ಲಿ ಇಳಿದ ನಂತರ, ವಿಮಾನ ನಿಲ್ದಾಣದಿಂದ ಹೊರಟ 20 ನಿಮಿಷಗಳ ನಂತರ ಪಾಕಿಸ್ತಾನ ವಿಮಾನ ನಿಲ್ದಾಣಕ್ಕೆ ಕ್ಷಿಪಣಿ ಅಪ್ಪಳಿಸಿತು ಎಂದು ತಿಳಿಯಿತು. ಆ ಸುದ್ದಿ ಭಯಾನಕ ಮತ್ತು ದುಃಖಕರವಾಗಿತ್ತು ಮತ್ತು ಈಗ ದುಬೈ ತಲುಪಿದ ನಂತರ ನಮಗೆ ನಿರಾಳವಾಗಿತ್ತು ಎಂದು ರಿಷಾದ್ ಹುಸೇನ್ ಹೇಳಿದ್ದಾರೆ.
ಇನ್ಯಾವತ್ತೂ ಪಾಕಿಸ್ತಾನಕ್ಕೆ ಬರಲ್ಲ
ಅದೇ ರೀತಿ ನ್ಯೂಜಿಲೆಂಡ್ ನ ಡೇನಿಯಲ್ ಮಿಚೆಲ್ ಸೇರಿದಂತೆ ಕೆಲ ಆಟಗಾರರು ಇನ್ನು ಯಾವತ್ತೂ ಪಾಕಿಸ್ತಾನದಲ್ಲಿ ಆಡಲು ಬರುವುದಿಲ್ಲ ಎಂದಿರುವುದಾಗಿ ರಿಷಾದ್ ಹೇಳಿದರು. ಪೇಶಾವರ್ ಜಲ್ಮಿ ತಂಡದ ಆಟಗಾರನಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಆಟಗಾರ ನಹಿದ್ ರಾಣಾ ಅವರ ಬಗ್ಗೆ ಮಾತನಾಡಿ, "ನಹಿದ್ ರಾಣಾ ತುಂಬಾ ಮೌನವಾಗಿದ್ದರು, ಬಹುಶಃ ಉದ್ವಿಗ್ನತೆಯಿಂದ.
ಅವರಿಗೆ ಏನೂ ಆಗುವುದಿಲ್ಲ ಎಂದು ನಾನು ಹೇಳುತ್ತಲೇ ಇದ್ದೆ. ಅಲ್ಲಾಹನ ದಯೆಯಿಂದ ನಾವು ಸುರಕ್ಷಿತವಾಗಿ ದುಬೈ ತಲುಪಿದ್ದೇವೆ. ನಾವು ವಿಮಾನ ನಿಲ್ದಾಣದಿಂದ ಹೊರಟ 20 ನಿಮಿಷಗಳ ನಂತರ ಕ್ಷಿಪಣಿಯು ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿತು ಎಂದು ದುಬೈನಲ್ಲಿ ಇಳಿದ ನಂತರ ನಾವು ಕೇಳಿದೆವು. ಆ ಸುದ್ದಿ ಭಯಾನಕ ಮತ್ತು ದುಃಖಕರವಾಗಿತ್ತು. ದುಬೈ ತಲುಪಿದ ನಂತರ ನಾವು ನಿರಾಳರಾದೆವು' ಎಂದು ಅವರು ಹೇಳಿದರು.
ಪಾಕಿಸ್ತಾನಕ್ಕೆ ಬಂದಾಗಲೆಲ್ಲ ಕುಟುಂಬ ಆತಂಕಕ್ಕೀಡಾಗಿರುತ್ತದೆ
ಅಂತೆಯೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದ ಆಟಗಾರರ ಕುಟುಂಬಗಳು ಚಿಂತಿತರಾಗಿದ್ದ ಬಗ್ಗೆಯೂ ರಿಷಾದ್ ಹುಸೇನ್ ತಿಳಿಸಿದ್ದು, 'ನಾನು ಪಾಕಿಸ್ತಾನಕ್ಕೆ ಆಡಲು ಹೋದಾಗಲೆಲ್ಲಾ, ಪರಿಸ್ಥಿತಿ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂದು ನನ್ನ ಕುಟುಂಬ ಚಿಂತಿಸುತ್ತದೆ.
ಈ ಬಾರಿ ಪಾಕಿಸ್ತಾನದಿಂದ ಬಾಂಬ್ ಸ್ಫೋಟಗಳು ಮತ್ತು ಕ್ಷಿಪಣಿ ದಾಳಿಗಳು ಎಂಬಿತ್ಯಾದಿ ಸುದ್ದಿಗಳನ್ನು ತಿಳಿದು ಅವರು ಸಹಜವಾಗಿ ಚಿಂತಿತರಾಗಿದ್ದರು ನಾನು ವೈಯಕ್ತಿಕವಾಗಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ ಮತ್ತು ನನ್ನ ಬಗ್ಗೆ ಚಿಂತಿಸಬೇಡಿ ಎಂದು ಸಮಾಧಾನಪಡಿಸುತ್ತಿದ್ದೆ .ದೇವರ ದಯೆಯಿಂದ ನಾವು ಒಂದು ಬಿಕ್ಕಟ್ಟನ್ನು ಮೀರಿ ದುಬೈ ತಲುಪಿದ್ದೇವೆ ಮತ್ತು ಈಗ ನನಗೆ ಚೆನ್ನಾಗಿ ಅನಿಸುತ್ತಿದೆ' ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ