
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ಕಾರಣದಿಂದಾಗಿ ಐಪಿಎಲ್ 2025ನ್ನು ಒಂದು ವಾರ ಸ್ಥಗಿತಗೊಳಿಸಲಾಯಿತು. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವಿನ ಪಂದ್ಯವನ್ನು ಕೂಡ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮರುದಿನ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಐಪಿಎಲ್ ಸ್ಥಗಿತಗೊಂಡಿತು.
LSG ವಿರುದ್ಧ RCB ಪಂದ್ಯ ನಡೆದಿದ್ದರೆ, ರಜತ್ ಪಾಟೀದಾರ್ ಅವರ ಬದಲಿಗೆ ಜಿತೇಶ್ ಶರ್ಮಾ ನಾಯಕರಾಗಿರುತ್ತಿದ್ದರು ಎಂದು ಫ್ರಾಂಚೈಸಿ ತಿಳಿಸಿದೆ. ರಜತ್ ಪಾಟೀದಾರ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ತಾನು ಸಿದ್ಧನಾಗಿದ್ದೇನೆ ಎಂದು ಐಪಿಎಲ್ ಮೆಗಾ ಹರಾಜಿನಲ್ಲಿ 11 ಕೋಟಿ ರೂ.ಗೆ ಖರೀದಿಸಲಾದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ RCB ಪೋಸ್ಟ್ ಮಾಡಿದ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಕ್ಸ್‌ಟ್ರಾ ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ರಜತ್ ಪಾಟೀದಾರ್ ಬೆರಳಿಗೆ ಗಾಯವಾಗಿತ್ತು. 11ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅವರ ಹೊಡೆತ ಪಾಟೀದಾರ್ ಅವರ ಬೆರಳಿಗೆ ತಗುಲಿತು. ಆರಂಭದಲ್ಲಿ ತಂಡದಲ್ಲಿಯೇ ಉಳಿದಿದ್ದರೂ, ಅಂತಿಮವಾಗಿ ಪಾಟೀದಾರ್ ಹೊರನಡೆಯಬೇಕಾಯಿತು. ಇದರಿಂದಾಗಿ ಕೊಹ್ಲಿ ತಾತ್ಕಾಲಿಕವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದಾಗ್ಯೂ, ಪಾಟೀದಾರ್ ಮುಂದಿನ ಪಂದ್ಯದಿಂದ ಹೊರಗುಳಿದ ಕಾರಣ ವಿರಾಟ್ ಕೊಹ್ಲಿ ನಾಯಕನಾಗಿ ಮುಂದುವರಿಯದ ಕಾರಣ ಆಶ್ಚರ್ಯಕರವಾಗಿ ಆ ಜವಾಬ್ದಾರಿಯನ್ನು ಜಿತೇಶ್ ಶರ್ಮಾ ಅವರಿಗೆ ವಹಿಸಲಾಗಿತ್ತು.
'ಅವರು ನನಗೆ ಆರ್‌ಸಿಬಿ ತಂಡದ ನಾಯಕತ್ವ ವಹಿಸುವ ಅವಕಾಶ ನೀಡಿದ್ದರು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ದೊಡ್ಡ ವಿಷಯ' ಎಂದು ಆರ್‌ಸಿಬಿ ಹಂಚಿಕೊಂಡ ವಿಡಿಯೋದಲ್ಲಿ ಜಿತೇಶ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ ಮೇ 09 ರಂದು ಲಕ್ನೋದಲ್ಲಿ ನಿಗದಿಯಾಗಿದ್ದ ಆರ್‌ಸಿಬಿ vs ಎಲ್‌ಎಸ್‌ಜಿ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು. ವಾಯುಪ್ರದೇಶದ ನಿರ್ಬಂಧಗಳು ಮತ್ತು ಭದ್ರತಾ ಕಾಳಜಿಗಳು ಹೆಚ್ಚಾದ ಕಾರಣ ಬಿಸಿಸಿಐ ಮೇ 9ರಿಂದ ಏಳು ದಿನಗಳವರೆಗೆ ಪಂದ್ಯಾವಳಿಯನ್ನು ಸ್ಥಗಿತಗೊಳಿಸಿತು.
ಪಂದ್ಯ ರದ್ದಾದ ಬಳಿಕ ಆರ್‌ಸಿಬಿ ಆಟಗಾರರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದರು. ಐಪಿಎಲ್ 2025ರ ಉಳಿದ ಪಂದ್ಯಗಳ ಆರಂಭದ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
Advertisement