
ನವದೆಹಲಿ: 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಸೋಮವಾರ (ಮೇ 12) ವಿದಾಯ ಹೇಳಿದ್ದಾರೆ. ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳ ನಂತರ, ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ, ಪ್ರತಿ ಸರಣಿಯ ನಂತರ ಅವರು ವಿಕಸನಗೊಂಡು 'ಸ್ವಲ್ಪ ಬುದ್ಧಿವಂತ ಮತ್ತು ವಿನಮ್ರ'ರಾಗಿ ಮರಳುವುದನ್ನು ನೋಡುವುದು ಒಂದು ಸೌಭಾಗ್ಯ ಎಂದಿದ್ದಾರೆ.
36 ವರ್ಷದ ಕೊಹ್ಲಿ ಸೋಮವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಕೊಹ್ಲಿ ಭಾರತ ಪರ 123 ಟೆಸ್ಟ್‌ಗಳಲ್ಲಿ ಆಡಿದ್ದು, 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ.
37 ವರ್ಷದ ಅನುಷ್ಕಾ ಶರ್ಮಾ, ಪ್ರತಿ ಟೆಸ್ಟ್ ಸರಣಿಯ ನಂತರ ವಿರಾಟ್ ಕೊಹ್ಲಿಯ ಬೆಳವಣಿಗೆ ಮತ್ತು ಕ್ರಿಕೆಟಿಗನ ವಿಕಸನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಅವರು (ಜನರು) ನಿಮ್ಮ ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ನಿಮ್ಮಲ್ಲಿನ ಹೋರಾಟಗಳು ಮತ್ತು ಆಟದ ಈ ಸ್ವರೂಪಕ್ಕೆ ನೀವು ನೀಡಿದ ಅಚಲ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ' ಎಂದಿದ್ದಾರೆ.
'ಇದೆಲ್ಲ ನಿಮ್ಮಿಂದ ಎಷ್ಟನ್ನು ಕಿತ್ತುಕೊಂಡಿದೆ ಎಂಬುದು ನನಗೆ ಗೊತ್ತು. ಪ್ರತಿ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರನಾಗಿ ಹಿಂತಿರುಗಿರುವಿರಿ ಮತ್ತು ಅದನ್ನೆಲ್ಲ ದಾಟಿ ಆಟಗಾರನಾಗಿ ಮತ್ತು ವ್ಯಕ್ತಿಯಾಗಿ ನೀವು ವಿಕಸನಗೊಳ್ಳುವುದನ್ನು ನೋಡುವುದು ಒಂದು ಸೌಭಾಗ್ಯ' ಎಂದು ಅವರು ಕೊಹ್ಲಿ ಜೊತೆಗಿನ ತಮ್ಮ ಫೋಟೊ ಹಂಚಿಕೊಂಡು ಶೀರ್ಷಿಕೆ ನೀಡಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿ ಹೊಂದಿದ್ದ 36 ವರ್ಷದ ವಿರಾಟ್ ಕೊಹ್ಲಿ ಇನ್ಮುಂದೆ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.
'ಬಿಳಿ ಟೆಸ್ಟ್ ಕಿಟ್ ಧರಿಸಿ ಆಡುತ್ತಿರುವಾಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನೀವು ನಿವೃತ್ತರಾಗುತ್ತೀರಿ ಎಂದು ನಾನು ಯಾವಾಗಲೂ ಊಹಿಸುತ್ತಿದ್ದೆ. ಆದರೆ, ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ. ಆದ್ದರಿಂದ ನಾನು ನಿಮಗೆ ಹೇಳಲು ಬಯಸುತ್ತೇನೆ, ನಿಮ್ಮ ವೃತ್ತಿಜೀವನದುದ್ದಕ್ಕೂ ಸಾಕಷ್ಟು ಶ್ರಮಿಸಿದ್ದೀರಿ ಮತ್ತು ಸಾಧಿಸಿದ್ದೀರಿ. ಹೀಗಾಗಿ ಈ ವಿದಾಯಕ್ಕೆ ನೀವು ಸಂಪೂರ್ಣ ಅರ್ಹರು' ಎಂದು ನಟಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ವಿವಾಹವಾದರು. ದಂಪತಿಗೆ ನಾಲ್ಕು ವರ್ಷದ ಮಗಳು ವಮಿಕಾ ಮತ್ತು 15 ತಿಂಗಳ ಮಗ ಅಕಾಯ್ ಇದ್ದಾರೆ.
Advertisement