
ನವದೆಹಲಿ: ಟೆಸ್ಟ್ ಕ್ರಿಕೆಟಿಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ ಮಾಜಿ ಕ್ರಿಕೆಟ್ ದಿಗ್ಗಜ ಆಟಗಾರರಾದ ಸಚಿನ್ ತೆಂಡೊಲ್ಕರ್, ವೀರೇಂದ್ರ ಸೆಹ್ವಾಗ್, ಎಬಿ ಡಿವಿಲಿಯರ್ಸ್, ಸೇರಿದಂತೆ ಹಲವು ಖ್ಯಾತನಾಮರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಕೊಹ್ಲಿ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಜಗತ್ತು ಮೀರಿ ಸೇನಾ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಯುಕೆ ಮಾಜಿ ಪಿಎಂ ರಿಷಿ ಸುನಕ್, ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಮತ್ತು ಇಂಗ್ಲಿಷ್ ಫುಟ್ಬಾಲ್ ಆಟಗಾರ ಹ್ಯಾರಿ ಕೇನ್ ಅವರು ಕೊಹ್ಲಿಗೆ ಶುಭಾಶಯ ಸಲ್ಲಿಸಿದ್ದಾರೆ.
ಸಚಿನ್ ತೆಂಡೊಲ್ಕರ್, 12 ವರ್ಷಗಳ ಹಿಂದೆ ಕೊನೆಯ ಟೆಸ್ಟ್ ಆಡಿದ ಸಮಯದ ಸುಂದರ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಿಮ್ಮ ದಿವಂಗತ ತಂದೆಯ ನೆನಪಿಗಾಗಿ ನನಗೆ ಒಂದು ದಾರವನ್ನು (ಮಂತ್ರಿಸಿ ಕೊಡುವ ದಾರಗಳು ಕಷ್ಟ ನಿವಾರಿಸಿ ಹೊಸ ದಾರಿ ತೋರಿಸುತ್ತವೆ ಎಂಬ ನಂಬಿಕೆ ಬಹಳ ಜನರದ್ದು) ಉಡುಗೊರೆಯಾಗಿ ನೀಡಲು ಮುಂದಾದಿರಿ. ಅದು ತುಂಬಾ ವೈಯಕ್ತಿಕ ವಿಷಯವಾಗಿತ್ತು, ಆದ್ದರಿಂದ ಅದನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ನಾನು ಭಾವಿಸಿದೆ. ಆದರೆ ನಿಮ್ಮ ಭಾವನೆಗಳು ಇನ್ನೂ ನನ್ನ ಹೃದಯವನ್ನು ಮುಟ್ಟುತ್ತವೆ. ಪ್ರತಿಯಾಗಿ ನೀಡಲು ನನ್ನ ಬಳಿ ಯಾವುದೇ ಥ್ರೆಡ್ ಇಲ್ಲದಿದ್ದರೂ, ನನಗೆ ನಿಮ್ಮ ಬಗ್ಗೆ ತುಂಬಾ ಗೌರವವಿದೆ. ನಿಮ್ಮ ನಿವೃತ್ತಿಗೆ ನಾನು ಹೃದಯಾಂತರಾಳದಿಂದ ಶುಭಾಶಯಗಳು ಎಂದಿದ್ದಾರೆ.
ವಿರೇಂದ್ರ ಸೆಹ್ವಾಗ್, ನಂಬಲಾಗದ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ವಿರಾಟ್. ನಿನ್ನ ನೋಡಿದ ದಿನದಿಂದ ನೀನು ಸ್ಪೆಷಲ್ ಅಂತ ಗೊತ್ತಾಯ್ತು. ನೀವು ತಂದ ತೀವ್ರತೆ ಮತ್ತು ನಿಮ್ಮ ಟೆಸ್ಟ್ ಕ್ರಿಕೆಟ್ ಆಟವನ್ನು ಉತ್ಸಾಹ, ಸಂತೋಷದಿಂದ ವೀಕ್ಷಿಸಿದ್ದೇವೆ. ನೀವು ಟೆಸ್ಟ್ ಕ್ರಿಕೆಟ್‌ನ ಉತ್ತಮ ರಾಯಭಾರಿಯಾಗಿದ್ದೀರಿ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನಿಮಗೆ ಉತ್ತಮ ಸಮಯಗಳು ಬರಲಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್, ಕೊಹ್ಲಿ ಸಂಕಲ್ಪ ಮತ್ತು ಕೌಶಲ್ಯ ಯಾವಾಗಲೂ ನನಗೆ ಸ್ಫೂರ್ತಿ. ನಿಜವಾದ ದಂತಕಥೆ ಎಂದಿದ್ದಾರೆ.
ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿಕೊಹ್ಲಿ ಅವರ ಭಾವಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನವನ್ನು ಅಭಿನಂದಿಸಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ, ಯುಕೆ ಮಾಜಿ ಪ್ರಧಾನಿ ರಿಷಿ ಸುನಾಕ್, ಈ ಬೇಸಿಗೆಯಲ್ಲಿ ವಿರಾಟ್ ಕೊಹ್ಲಿಯನ್ನು ಕೊನೆಯ ಬಾರಿಗೆ ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ಅವರು ಒಬ್ಬ ಲೆಜೆಂಡರಿ ಆಟಗಾರ ಆಗಿದ್ದಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್, ಚಾಣಾಕ್ಷ ನಾಯಕ ಮತ್ತು ಟೆಸ್ಟ್ ಕ್ರಿಕೆಟ್‌ನ ನಿಜವಾದ ಮೌಲ್ಯವನ್ನು ಯಾವಾಗಲೂ ಅರ್ಥಮಾಡಿಕೊಳ್ಳುವ ಅಸಾಧಾರಣ ಸ್ಪರ್ಧಿ ಎಂದಿದ್ದಾರೆ.
ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದ್ದಾರೆ.
Advertisement