
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025 ಮತ್ತೆ ಆರಂಭವಾಗುತ್ತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 17ರ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ ಪುನರಾರಂಭವಾಗುವ ಕುರಿತು ಘೋಷಣೆಯಾದ ನಂತರ, ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು KKR ವಿರುದ್ಧದ ಉಳಿದ ಎರಡು ತವರಿನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿತ್ತು. ಆದಾಗ್ಯೂ, ಫ್ರಾಂಚೈಸಿ ಇದೀಗ ನಿರ್ದಿಷ್ಟವಾಗಿ KKR ವಿರುದ್ಧದ ಪಂದ್ಯದ ಟಿಕೆಟ್ ಮತ್ತು ಮರುಪಾವತಿ ಕುರಿತು ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಐಪಿಎಲ್ ಸ್ಥಗಿತಕ್ಕೂ ಮುನ್ನ ಪಂದ್ಯವನ್ನು ಮೇ 17ರಂದು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿತ್ತು. ಇದೀಗ ಪರಿಷ್ಕೃತ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಾರ ಅದೇ ಸ್ಥಳ, ದಿನಾಂಕ ಮತ್ತು ಪಂದ್ಯದ ಸಮಯ ಆಗಿರುವುದರಿಂದ ಈ ಪಂದ್ಯಕ್ಕಾಗಿ ಮೊದಲು ಖರೀದಿಸಿದ ಟಿಕೆಟ್‌ಗಳು ಮಾನ್ಯವಾಗಿರುತ್ತವೆ. ಇದರ ಪರಿಣಾಮವಾಗಿ, ಈ ನಿರ್ದಿಷ್ಟ ಪಂದ್ಯಕ್ಕೆ ಯಾವುದೇ ಟಿಕೆಟ್ ಮರುಪಾವತಿ ಇರುವುದಿಲ್ಲ. ಈ ಮೊದಲೇ ಟಿಕೆಟ್‌ಗಳನ್ನು ಖರೀದಿಸಿರುವ ಅಭಿಮಾನಿಗಳು ಅವುಗಳ ಅನ್ವಯವೇ ಪಂದ್ಯಕ್ಕೆ ಹಾಜರಾಗಬಹುದು ಎನ್ನಲಾಗಿದೆ.
ಎಕ್ಸ್‌ನಲ್ಲಿ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ, ಕೆಕೆಆರ್ ವಿರುದ್ಧ ಆರ್‌ಸಿಬಿ ಪಂದ್ಯದ ಸ್ಥಳ, ದಿನಾಂಕ ಅಥವಾ ಸಮಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲದ ಕಾರಣ, ಈ ಹಿಂದೆ ಖರೀದಿಸಿದ ಎಲ್ಲ ಟಿಕೆಟ್‌ಗಳು ಮಾನ್ಯವಾಗಿರುತ್ತವೆ. ಟಿಕೆಟ್ ಹೊಂದಿರುವವರಿಗೆ ಯಾವುದೇ ಮರುಪಾವತಿ ಪ್ರಕ್ರಿಯೆ ಇರುವುದಿಲ್ಲ. ಅಭಿಮಾನಿಗಳು ತಮ್ಮಲ್ಲಿರುವ ಟಿಕೆಟ್ ಮೂಲಕವೇ ಪಂದ್ಯಕ್ಕೆ ಹಾಜರಾಗಬಹುದು ಎಂದು ಸ್ಪಷ್ಟಪಡಿಸಿದೆ.
Advertisement