
ನವದೆಹಲಿ: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸಮಯದಲ್ಲಿ ನಾನು ಭಾರತ ತಂಡದ ಕೋಚ್ ಆಗಿದ್ದರೆ, ನಾಯಕ ರೋಹಿತ್ ಶರ್ಮಾ ಅವರು ಫಾರ್ಮ್‌ನಲ್ಲಿ ಇಲ್ಲದಿದ್ದರೂ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯಲು ಅವಕಾಶ ನೀಡುತ್ತಿರಲಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. 2024-25ರ ಪ್ರವಾಸದಲ್ಲಿ ಆಡಿದ ಐದು ಇನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾದ ಕಾರಣ ರೋಹಿತ್ ಶರ್ಮಾ ಸರಣಿಯ ಕೊನೆ ಪಂದ್ಯದಿಂದಲೂ ಹೊರಗುಳಿದಿದ್ದರು. ಭಾರತ ಆ ಟೆಸ್ಟ್ ಸರಣಿಯನ್ನು 1-3 ಅಂತರದಿಂದ ಸೋತಿತ್ತು.
ಈ ಆವೃತ್ತಿಯ ಐಪಿಎಲ್ ಪಂದ್ಯವೊಂದರ ವೇಳೆ ರೋಹಿತ್ ಶರ್ಮಾ ಅವರ ಜೊತೆ ಮಾತನಾಡಿದ್ದೆ ಮತ್ತು ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿಯನ್ನು ತಾನು ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ತಿಳಿಸಿದ್ದೆ ಎಂದು ಶಾಸ್ತ್ರಿ ಹೇಳಿದರು.
'ನಾನು ಟಾಸ್‌ನಲ್ಲಿ ರೋಹಿತ್ ಅವರನ್ನು ಬಹಳಷ್ಟು ಬಾರಿ ನೋಡಿದ್ದೆ. ಟಾಸ್‌ನಲ್ಲಿ, ನಿಮಗೆ ಮಾತನಾಡಲು ಸಾಕಷ್ಟು ಸಮಯ ಸಿಗುವುದಿಲ್ಲ. ಆದರೂ, ಒಂದು ಪಂದ್ಯದಲ್ಲಿ ನಾನು ಅವರ ಭುಜದ ಮೇಲೆ ಕೈ ಹಾಕಿದ್ದೆ. ಅದು ಮುಂಬೈನಲ್ಲಿ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಕೋಚ್ ಆಗಿದ್ದರೆ, ನೀವು ಆ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಬಿಡುತ್ತಿರಲಿಲ್ಲ ಎಂದು ಅವರಿಗೆ ಹೇಳಿದೆ.
ಇತ್ತೀಚೆಗೆ ಐಸಿಸಿ ರಿವ್ಯೂಗೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ, ಹಿಂದಿನ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಸಮಯದಲ್ಲಿ ತಾವು ತರಬೇತುದಾರರಾಗಿದ್ದರೆ, ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಿದ್ದರೂ ಅಂತಿಮ ಟೆಸ್ಟ್‌ನಲ್ಲಿ ಆಡುವಂತೆ ನೋಡಿಕೊಳ್ಳುತ್ತಿದ್ದೆ. ಆ ಹಂತದಲ್ಲಿ ಸರಣಿ ಮುಗಿದಿರಲಿಲ್ಲ ಮತ್ತು ಪ್ರತಿ ಪಂದ್ಯವೂ ನಿರ್ಣಾಯಕವಾಗಿತ್ತು ಎಂದು ಹೇಳಿದರು. ಈ ಹಿಂದೆ ಟಿ20 ಸ್ವರೂಪದಿಂದ ನಿವೃತ್ತಿ ಪಡೆದಿದ್ದ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಸ್ಕೋರ್‌ಲೈನ್ 2-1 ಎಂಬ ಕಾರಣಕ್ಕಾಗಿ ತಂಡವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಸ್ಕೋರ್ ಏನೇ ಇರಲಿ, ಕೋಚ್ ಅಥವಾ ಆಟಗಾರನ ಮನಸ್ಥಿತಿ ಹೋರಾಟವನ್ನು ಮುಂದುವರಿಸುವುದು ಆಗಿರಬೇಕು ಮತ್ತು ಅಂತಹ ಹಂತದಲ್ಲಿ ತಂಡವನ್ನು ತೊರೆಯುವುದು ಸ್ವೀಕಾರಾರ್ಹವಲ್ಲ. ಸಿಡ್ನಿಯಲ್ಲಿ ಅಂತಿಮ ಪಂದ್ಯದಲ್ಲಿ ಆಡುವಂತೆ ರೋಹಿತ್‌ಗೆ ಒತ್ತಾಯಿಸುತ್ತಿದ್ದೆ ಎಂದು ಅವರು ಒತ್ತಿ ಹೇಳಿದರು.
ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವು ಕೇವಲ 30-40 ರನ್‌ಗಳ ಅಂತರದಲ್ಲಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಿದ್ದರೂ, ಅವರನ್ನು ಪಂದ್ಯ ವಿಜೇತ ಎಂದು ಪರಿಗಣಿಸುತ್ತಿದ್ದೆ. ಸಿಡ್ನಿಯಲ್ಲಿನ ಪಿಚ್ ಸವಾಲಿನದ್ದಾಗಿತ್ತು. ಅದು ವ್ಯತ್ಯಾಸವನ್ನುಂಟು ಮಾಡಬಹುದಿತ್ತು. ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ರೋಹಿತ್ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶಾಸ್ತ್ರಿ ಹೇಳಿದರು.
ಅಂತಿಮ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪರಿಸ್ಥಿತಿಯನ್ನು ಗ್ರಹಿಸಿ, ಅದಕ್ಕನುಗುಣವಾಗಿ ಆಡಿದ್ದರೆ ಮತ್ತು ಅಗ್ರ ಕ್ರಮಾಂಕದಲ್ಲಿ 35-40 ರನ್‌ಗಳನ್ನು ಗಳಿಸಿದ್ದರೆ, ಅದು ಆಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿತ್ತು. ಇದು ಸರಣಿಯನ್ನು ಸಮಬಲಗೊಳಿಸುತ್ತಿತ್ತು. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬ ಆಟಗಾರನು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಜನರು ವಿಭಿನ್ನ ಶೈಲಿಗಳನ್ನು ಹೊಂದಿರುತ್ತಾರೆ. ಇದು ನನ್ನ ಶೈಲಿಯಾಗುತ್ತಿತ್ತು ಮತ್ತು ನಾನು ಅವರಿಗೆ ಅದನ್ನೇ ತಿಳಿಸಿದ್ದೆ. ಅದು ಬಹಳ ಸಮಯದಿಂದರೂ ನನ್ನ ಹೃದಯದಲ್ಲಿ ಕುಳಿತಿದೆ. ನಾನು ಅದನ್ನು ಹೊರಹಾಕಬೇಕಾಗಿತ್ತು ಮತ್ತು ನಾನು ಅವರಿಗೆ ಅದನ್ನು ಹೇಳಿದ್ದೇನೆ ಎಂದು ಅವರು ತಿಳಿಸಿದರು.
ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Advertisement