
ನವದೆಹಲಿ: ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ಬಳಿಕ ಯುಜ್ವೇಂದ್ರ ಚಾಹಲ್ ಮತ್ತು ಆರ್‌ಜೆ ಮಹ್ವಾಶ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿಗಳು ದಟ್ಟವಾಗಿ ಹರಡಿವೆ. ಈ ಬೆನ್ನಲ್ಲೇ, ಚಾಹಲ್ ಅವರನ್ನು 'ಕಾಳಜಿಯುಳ್ಳ, ವಿನಮ್ರ ಮತ್ತು ಒಳ್ಳೆಯ ವ್ಯಕ್ತಿ' ಎಂದು ಮಹ್ವಾಶ್ ಕರೆದಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಇನ್‌ಸ್ಟಂಟ್ ಬಾಲಿವುಡ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಮಹ್ವಾಶ್ ಅವರನ್ನು ಸ್ಟಾರ್ ಕ್ರಿಕೆಟಿಗನಿಂದ ನೀವು ಯಾವ ಗುಣವನ್ನು ಕದಿಯಲು ಬಯಸುತ್ತೀರಿ ಎಂದು ಕೇಳಲಾಯಿತು. 'ಅವರ ಒಳ್ಳೆತನ ಮತ್ತು ಅವರು ತುಂಬಾ ವಿನಮ್ರ ವ್ಯಕ್ತಿಯಾಗಿದ್ದಾರೆ. ಅವರು ನಿಜವಾಗಿಯೂ ನೀವು ಭೇಟಿಯಾಗುವ ಅತ್ಯಂತ ಕಾಳಜಿಯುಳ್ಳ ಜನರಲ್ಲಿ ಒಬ್ಬರು. ಅವರು ಪ್ರೀತಿಸುವ ಜನರಿಗೆ ಯಾವಾಗಲೂ ಲಭ್ಯವಿರುತ್ತಾರೆ. ನಾನು ಖಂಡಿತವಾಗಿಯೂ ಅವರ ಆ ಗುಣವನ್ನು ಕದಿಯುತ್ತೇನೆ' ಎಂದರು.
ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಬಳಿಕ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಾಹಲ್ ಅವರು ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬಂದಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ್ದ ಮಹ್ವಾಶ್, 'ನಾನು ಸಿಂಗಲ್ ಆಗಿದ್ದೇನೆ ಮತ್ತು ಇಂದಿನ ಕಾಲದಲ್ಲಿ ಮದುವೆಯ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ನಾನು ಮದುವೆಯಾಗಬೇಕಾದಾಗ ಮಾತ್ರ ಡೇಟಿಂಗ್ ಮಾಡುತ್ತೇನೆ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ ಏಕೆಂದರೆ, ನಾನು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತೇನೆ' ಎಂದಿದ್ದರು.
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಡಿಸೆಂಬರ್ 2020 ರಲ್ಲಿ ಗುರಗಾಂವ್‌ನಲ್ಲಿ ವಿವಾಹವಾಗಿದ್ದರು. 2025ರ ಫೆಬ್ರುವರಿಯಲ್ಲಿ, ಅವರು ಬಾಂದ್ರಾ ಕುಟುಂಬ ನ್ಯಾಯಾಲಯದ ಹೊರಗೆ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 18 ತಿಂಗಳು ಪ್ರತ್ಯೇಕವಾಗಿ ವಾಸಿಸಿದ ನಂತರ, ಯುಜ್ವೇಂದ್ರ ಮತ್ತು ಧನಶ್ರೀ ಮಾರ್ಚ್ 20, 2025 ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು.
ವರದಿಗಳ ಪ್ರಕಾರ, ಯುಜ್ವೇಂದ್ರ ಚಾಹಲ್ ಧನಶ್ರೀ ವರ್ಮಾ ಅವರಿಗೆ ₹4.75 ಕೋಟಿ ಜೀವನಾಂಶವನ್ನು ನೀಡಿದ್ದಾರೆ ಎನ್ನಲಾಗಿದೆ.
Advertisement