
ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ತೆಗೆದುಕೊಂಡ ಮಾನದಂಡದಿಂದಾಗಿಯೇ ಜಸ್ಪ್ರೀತ್ ಬುಮ್ರಾ ಅವರನ್ನು ಟೆಸ್ಟ್ ನಾಯಕತ್ವಕ್ಕೆ ಪರಿಗಣಿಸದೇ ಇರಲು ಕಾರಣವಾಗಿರಬಹುದು ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗಮನಸೆಳೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಶುಭಮನನ್ ಗಿಲ್ ಅವರನ್ನು ನಾಯಕನನ್ನಾಗಿ ಮಾಡಲಾಗುತ್ತದೆ ಮತ್ತು ಬುಮ್ರಾ ಅವರನ್ನು ಕೈಬಿಡಲಾಗಿದೆ ಎಂಬ ಊಹಾಪೋಹಗಳ ಮಧ್ಯೆ ಅವರ ಹೇಳಿಕೆಗಳು ಬಂದಿವೆ. ಆಯ್ಕೆದಾರರು ಈ ವಾರದ ಕೊನೆಯಲ್ಲಿ ಔಪಚಾರಿಕ ಘೋಷಣೆ ಮಾಡುವ ನಿರೀಕ್ಷೆಯಿದ್ದು, ಇಂಗ್ಲೆಂಡ್ ಸರಣಿಗೆ ಭಾರತದ ತಂಡವನ್ನು ಸಹ ಘೋಷಿಸಲಿದ್ದಾರೆ.
2024 ರಲ್ಲಿ ಟಿ20 ವಿಶ್ವಕಪ್ ನಂತರ, ಆಯ್ಕೆದಾರರು ಹಾರ್ದಿಕ್ ಅವರನ್ನು ನಿರ್ಲಕ್ಷಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕನನ್ನಾಗಿ ಹೆಸರಿಸಲು ನಿರ್ಧರಿಸಿದರು. ಆ ಸಮಯದಲ್ಲಿ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿರುವ ಆಟಗಾರನನ್ನು ನಾಯಕನನ್ನಾಗಿ ಮಾಡುವ ಅಗತ್ಯವಿದೆ ಎಂದು ವಿವರಿಸಿದ್ದರು. ಹಾರ್ದಿಕ್ ಅವರ ಫಿಟ್ನೆಸ್ ಸಮಸ್ಯೆಗಳೇ ಅವರನ್ನು ಕಡೆಗಣಿಸಲು ಕಾರಣ ಎಂದು ಅವರು ಸುಳಿವು ನೀಡಿದರು.
ಗಾಯಗಳು ಮತ್ತು ಕೆಲಸದ ಹೊರೆಯಿಂದಾಗಿ ಬುಮ್ರಾ ಅವರನ್ನು ಪರಿಗಣಿಸುತ್ತಿಲ್ಲ ಎಂದು ಬಂಗಾರ್ ಊಹಿಸಿದ್ದಾರೆ. ಬುಮ್ರಾ ಅವರು 5 ಟೆಸ್ಟ್‌ಗಳಲ್ಲಿ ಆಡುವುದಿಲ್ಲವಾದ್ದರಿಂದ ಅವರಿಗೆ ಉಪನಾಯಕತ್ವವನ್ನು ಕೂಡ ನೀಡಲು ಬಿಸಿಸಿಐ ಯೋಜಿಸುತ್ತಿಲ್ಲ ಎಂದು ವರದಿಗಳು ಹೇಳಿವೆ.
'ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಅವರನ್ನು T20I ನಾಯಕನನ್ನಾಗಿ ನೇಮಿಸಿದಾಗ ಹಾರ್ದಿಕ್ ಅವರಿಗೆ ಫಿಟ್ನೆಸ್ ಸಮಸ್ಯೆ ಜೊತೆಗೆ ಎಲ್ಲ ಪಂದ್ಯಗಳಿಗೆ ಅವರು ಲಭ್ಯವಿಲ್ಲದಿರಬಹುದು ಎಂಬ ಕಾರಣವಿತ್ತು. ಆದ್ದರಿಂದ, ನಾವು ಆಡುವ XI ನಲ್ಲಿ ಸ್ಥಾನ ಖಚಿತವಾಗಿರುವ ಆಟಗಾರನನ್ನು ನೋಡುತ್ತಿದ್ದರಿಂದ ಸೂರ್ಯ ಅವರನ್ನು T20I ನಾಯಕತ್ವಕ್ಕೆ ಆಯ್ಕೆ ಮಾಡಲಾಯಿತು. ಈಗ, ನಾವು ಅದೇ ಚಿಂತನೆಯನ್ನು ಟೆಸ್ಟ್ ನಾಯಕತ್ವದೊಂದಿಗೆ ಸಮೀಕರಿಸಿದರೆ, ಆ ಆಧಾರದ ಮೇಲೆ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕತ್ವದಿಂದ ಕೈಬಿಡಬೇಕಾಗಬಹುದು' ಎಂದು ಅವರು ಹೇಳಿದರು.
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡು ಟೆಸ್ಟ್‌ಗಳಿಗೆ ಬುಮ್ರಾ ಭಾರತದ ಹಂಗಾಮಿ ನಾಯಕನಾಗಿ ಕಾರ್ಯನಿರ್ವಹಿಸಿದರು. ಇಂಗ್ಲೆಂಡ್ ಸರಣಿಗೆ ಹಿಟ್‌ಮ್ಯಾನ್ ಮರಳುವ ನಿರೀಕ್ಷೆಗಳ ಮಧ್ಯೆಯೇ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಎಲ್ಲರನ್ನು ಅಚ್ಚರಿಗೆ ತಳ್ಳಿದರು. ಅದಾದ ಬಳಿಕ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
Advertisement