
ಮೇ 26ರಂದು ನಡೆಯಲಿರುವ ತಮ್ಮ ಅಂತಿಮ ಲೀಗ್ ಹಂತದ ಪಂದ್ಯದ ನಂತರ ಮೂವರು ಪ್ರಮುಖ ವಿದೇಶಿ ಆಟಗಾರರು ತವರಿಗೆ ಮರಳಲಿರುವ ಕಾರಣ, ಮುಂಬೈ ಇಂಡಿಯನ್ಸ್ (MI) ಜಾನಿ ಬೈರ್ಸ್ಟೋವ್, ರಿಚರ್ಡ್ ಗ್ಲೀಸನ್ ಮತ್ತು ಚರಿತ್ ಅಸಲಂಕಾ ಅವರನ್ನು IPL 2025ರ ಆವೃತ್ತಿಯ ಉಳಿದ ಪಂದ್ಯಗಳಿಗೆ ತಾತ್ಕಾಲಿಕ ಬದಲಿ ಆಟಗಾರರನ್ನಾಗಿ ಘೋಷಿಸಿದೆ.
ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ವಿಲ್ ಜಾಕ್ಸ್ ಅವರ ಬದಲಿಗೆ ಐಪಿಎಲ್ 2025ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಬೈರ್ಸ್ಟೋವ್ ಅವರನ್ನು ಮುಂಬೈ ತಂಡ ಇದೀಗ 5.25 ಕೋಟಿ ರೂಪಾಯಿಗಳಿಗೆ ಕರೆತಂದಿದೆ. ವಿಲ್ ಜಾಕ್ಸ್ ಮೇ 29ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಮರಳಲಿದ್ದಾರೆ. ಬೈರ್ಸ್ಟೋವ್ ಈ ಆವೃತ್ತಿಯಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 12 ಇನಿಂಗ್ಸ್‌ಗಳಲ್ಲಿ 52.50 ಸರಾಸರಿಯಲ್ಲಿ 525 ರನ್ ಗಳಿಸಿದ್ದಾರೆ. ಆದಾಗ್ಯೂ, ಅವರನ್ನು ವೆಸ್ಟ್ ಇಂಡೀಸ್ ಸರಣಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಲ್ಲ.
ಅನುಭವಿ ಟಿ20 ಸೀಮರ್ ರಿಚರ್ಡ್ ಗ್ಲೀಸನ್, ರಯಾನ್ ರಿಕಲ್ಟನ್ ಬದಲಿಗೆ 1 ಕೋಟಿ ರೂ. ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. 12 ಇನಿಂಗ್ಸ್‌ಗಳಲ್ಲಿ 153.42 ಸ್ಟ್ರೈಕ್ ರೇಟ್‌ನಲ್ಲಿ 336 ರನ್ ಗಳಿಸಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಿಕಲ್ಟನ್, ದಕ್ಷಿಣ ಆಫ್ರಿಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂತಿಮ ಪಂದ್ಯಕ್ಕೆ ತೆರಳುತ್ತಿದ್ದಾರೆ. ಅವರು ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ.
ಶ್ರೀಲಂಕಾದ ಚರಿತ್ ಅಸಲಂಕಾ ಅವರು ಕಾರ್ಬಿನ್ ಬಾಷ್ ಬದಲಿಗೆ 75 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ WTC ಅಂತಿಮ ತಂಡಕ್ಕೆ ಆಯ್ಕೆಯಾಗಿರುವ ಬಾಷ್, ಲೀಗ್ ಹಂತ ಮುಗಿದ ನಂತರ ನಿರ್ಗಮಿಸಲಿದ್ದಾರೆ.
ಸದ್ಯ 14 ಅಂಕಗಳು ಮತ್ತು +1.156 ರ NRR ನೊಂದಿಗೆ ಐಪಿಎಲ್ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ ತಲುಪಲು ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಾದ ಡೆಲ್ಲಿ ಕ್ಯಾಪಿಟಲ್ಸ್ (ಮೇ 21, ವಾಂಖೆಡೆ) ಮತ್ತು ಪಂಜಾಬ್ ಕಿಂಗ್ಸ್ (ಮೇ 26, ಜೈಪುರ) ವಿರುದ್ಧದ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಎರಡು ಪಂದ್ಯಗಳಲ್ಲಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್‌ಗೆ ಸ್ಥಾನ ಪಡೆಯಲಿದೆ. ತಂಡದ ನೆಟ್ ರನ್ ರೇಟ್ ಉತ್ತಮವಾಗಿದ್ದು, ಒಂದು ಗೆಲುವು ವಿಶೇಷವಾಗಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದರೂ ಸಾಕಾಗಬಹುದು.
Advertisement