
ಐಪಿಎಲ್ 2025ರ ಆವೃತ್ತಿಯಲ್ಲಿ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದು 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ CSK vs RR ಮುಖಾಮುಖಿಯಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ನೆರವಾದರು. ಪಂದ್ಯದ ನಂತರ, CSK ನಾಯಕ ಮತ್ತು ದಂತಕಥೆ MS ಧೋನಿ ಅವರನ್ನು ಭೇಟಿ ಮಾಡಿದ ವೈಭವ್ ಸೂರ್ಯವಂಶಿ ಅವರ ಆಶೀರ್ವಾದ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಪಂದ್ಯದ ನಂತರ, ವೈಭವ್ ಎಂಎಸ್ ಧೋನಿಯನ್ನು ಭೇಟಿಯಾದರು. 2011ರಲ್ಲಿ ಮುಂಬೈನಲ್ಲಿ ಎಂಎಸ್ ಧೋನಿ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದಾಗ ಸೂರ್ಯವಂಶಿ ಕೇವಲ 5 ದಿನಗಳ ಮಗು.
ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಎದುರಾದಾಗ ವೈಭವ್ ಸೂರ್ಯವಂಶಿ ಎಂಸ್ ಧೋನಿ ಅವರ ಪಾದಮುಟ್ಟಿ ನಮಸ್ಕರಿಸಲು ಮುಂದಾಗುತ್ತಾರೆ. ಆಗ ಧೋನಿ, ಅವರನ್ನು ಮೇಲೆತ್ತಿ ಕುಶಲೋಪರಿ ವಿಚಾರಿಸಿ ಮುನ್ನಡೆಯುತ್ತಾರೆ.
ಐಪಿಎಲ್ 2025ರ ಆವೃತ್ತಿಯಲ್ಲಿ ಕೇವಲ ನಾಲ್ಕು ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಅಭಿಮಾನವನ್ನು ಕೊನೆಗೊಳಿಸಿದೆ. ಆವೃತ್ತಿಯ ಆರಂಭದಿಂದಲೂ ಹೆಣಗಾಡುತ್ತಿದ್ದ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿತು. 14 ವರ್ಷದ ಆಟಗಾರನಿಗೆ ರಾಯಲ್ಸ್ 1.2 ಕೋಟಿ ರೂಪಾಯಿಗಳನ್ನು ಪಾವತಿಸಿ ಮೆಗಾ ಹರಾಜಿನಲ್ಲಿ ಖರೀದಿಸಿದಾಗ ಅನೇಕರ ಹುಬ್ಬೇರಿತ್ತು. ವೈಭವ್ ಆಡಿರುವ ಕೇವಲ 7 ಪಂದ್ಯಗಳಲ್ಲಿ 206.55 ಸ್ಟ್ರೈಕ್‌ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ. ತಾವು ಎದುರಿಸಿದ 101 ಎಸೆತಗಳಲ್ಲಿ 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಅತ್ಯಂತ ವೇಗವಾಗಿ ಶತಕ ಗಳಿಕ ಭಾರತೀಯ ಆಟಗಾರ ಎನಿಸಿಕೊಂಡರು. ಮಂಗಳವಾರ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅವರು 33 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
Advertisement