
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಜೇಕಬ್ ಬೆಥೆಲ್ ಅವರ ಬದಲಿಗೆ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಅವರನ್ನು ಆಯ್ಕೆ ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಆರ್‌ಸಿಬಿಯ ಲೀಗ್ ಹಂತದ ಪಂದ್ಯದ ನಂತರ ಮೇ 24 ರಂದು ಬೆಥೆಲ್ ತವರಿಗೆ ತೆರಳಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ವೈಟ್-ಬಾಲ್ ತಂಡದ ಭಾಗವಾಗಲಿದ್ದಾರೆ. ಇದರ ಪರಿಣಾಮವಾಗಿ, ಬದಲಿ ಆಟಗಾರ ಕೂಡ ಅದೇ ದಿನಾಂಕದಿಂದ ತಂಡಕ್ಕೆ ಸೇರಲಿದ್ದಾರೆ.
30 ವರ್ಷದ ಸೀಫರ್ಟ್, ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. 2022ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಸೀಫರ್ಟ್ 262 ಟಿ20 ಪಂದ್ಯಗಳನ್ನು ಆಡಿದ್ದು, 133.07 ಸ್ಟ್ರೈಕ್ ರೇಟ್‌ನಲ್ಲಿ 5,862 ರನ್ ಗಳಿಸಿದ್ದಾರೆ. ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಆರ್‌ಸಿಬಿಯ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಹಾಗೂ ಪ್ಲೇಆಫ್‌ಗೆ ಲಭ್ಯವಿರುತ್ತಾರೆ.
ಸೀಫರ್ಟ್ ಅವರನ್ನು 2 ಕೋಟಿ ರೂಪಾಯಿಗೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಟಾಪ್ 2ನಲ್ಲಿ ಸ್ಥಾನ ಪಡೆಯಲು RCB ಲೆಕ್ಕಾಚಾರ
ಈಗಾಗಲೇ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಶುಕ್ರವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ, ಈ ಮೂಲಕ ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಲೀಗ್ ಹಂತದ ಅಗ್ರ-ಎರಡು ಸ್ಥಾನಗಳಲ್ಲಿ ಜಾಗ ಪಡೆಯುವ ಗುರಿಯನ್ನು ಹೊಂದಿದೆ.
2016ರ ಆವೃತ್ತಿಯಲ್ಲಿ ಅಂತಿಮವಾಗಿ ರನ್ನರ್-ಅಪ್ ಆಗಿದ್ದ ಆರ್‌ಸಿಬಿ ನಂತರ ಅಂಕಪಟ್ಟಿಯಲ್ಲಿ ಮೊದಲು ಅಥವಾ ಎರಡನೇ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಈ ವರ್ಷ ಆರ್ ಸಿಬಿಗೆ ಕ್ವಾಲಿಫೈಯರ್ ಪಂದ್ಯ ಆಡುವ ಸುವರ್ಣ ಅವಕಾಶ ಸಿಕ್ಕಿದೆ. ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶ ಸಿಕ್ಕರೆ ಒಂದು ಪಂದ್ಯ ಗೆದ್ದು ಫೈನಲ್ ತಲುಪಬಹುದು, ಸೋತರೂ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗುತ್ತದೆ.
ಸದ್ಯ ಆಡಿರುವ 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಮೊದಲ ಎರಡು ಸ್ಥಾನದಲ್ಲಿ ಒಂದು ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ.
ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದಿಂದಾಗಿ ಲೀಗ್ ಸ್ಥಗಿತಗೊಳ್ಳುವ ಮುನ್ನ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿತ್ತು ಮತ್ತು ತಂಡವು ಸತತ ನಾಲ್ಕು ಗೆಲುವು ಸಾಧಿಸಿತ್ತು. ಆದರೆ, ಟೂರ್ನಿ ಪುನರಾರಂಭದ ನಂತರ ಕೆಕೆಆರ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದೀಗ 20 ದಿನಗಳ ವಿರಾಮದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುತ್ತಿದ್ದು, ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಶ್ ಹೇಜಲ್‌ವುಡ್, ಯಶ್ ದಯಾಳ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟನ್, ನುವಾನ್ ತುಷಾರಾ, ಲುಂಗಿ ಎಂಗಿಡಿ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಥರ್ವ ತೈಡೆ, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಸ್ಮರಣ್ ರವಿಚಂದ್ರನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಟ್ರಾವಿಸ್ ಹೆಡ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್, ವಿಯಾನ್ ಮುಲ್ಡರ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ರಾಹುಲ್ ಚಾಹರ್, ಸಿಮರ್ಜೀತ್ ಸಿಂಗ್, ಜೀಶಣ್ ಅನ್ಸಾರಿ, ಜಯದೇವ್ ಉನಾದ್ಕಟ್, ಇಶಾನ್ ಮಲಿಂಗಾ.
Advertisement