
ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ತನ್ನ ಕೊನೆಯ 2 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಲಿ ಟೂರ್ನಿಯ ತನ್ನ ಜರ್ನಿ ಅಂತ್ಯಗೊಳಿಸಿದೆ.
ಈ ಎರಡು ಪಂದ್ಯಕ್ಕೂ ಮೊದಲು ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ RCB ಮತ್ತು KKR ವಿರುದ್ಧ ಅಮೋಘ ಜಯದ ಮೂಲಕ ತನ್ನ ಅಂಕಗಳಿಕೆಯನ್ನು 13ಕ್ಕೆ ಏರಿಸಿಕೊಂಡು 6ನೇ ಸ್ಥಾನಕ್ಕೇರಿ ಟೂರ್ನಿಯ ಜರ್ನಿ ಅಂತ್ಯಗೊಳಿಸಿದೆ.
ಕೆಕೆಆರ್ ವಿರುದ್ಧ ದಾಖಲೆಯ ಜಯ
ಇನ್ನು ನಿನ್ನೆ ದೆಹಲಿಯಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿದ ಹೈದರಾಬಾದ್ ತಂಡ ಬರೊಬ್ಬರಿ 110 ರನ್ ಗಳ ಅಂತರದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 278 ರನ್ ಪೇರಿಸಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ 76ರನ್ ಚಚ್ಚಿದರೆ, ಅಭಿಷೇಕ್ ಶರ್ಮಾ 32 ರನ್ ಗಳಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ಹೆನ್ರಿಚ್ ಕ್ಲಾಸನ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಕೇವಲ 39 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 105ರನ್ ಕಲೆಹಾಕಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ರನ್ ಗಳಿಸಲು ಪರದಾಡಿದ ಕೆಕೆಆರ್
ಇನ್ನು ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ತಂಡ ಆರಂಭದಿಂದಲೇ ರನ್ ಗಳಿಸಲು ಪರದಾಡಿತು. ಸುನಿಲ್ ನರೇನ್ (31), ಅಂಜಿಕ್ಯಾ ರಹಾನೆ (15), ರಘವಂಶಿ (14), ಮನೀಷ್ ಪಾಂಡೆ (37), ಹರ್ಷಿತ್ ರಾಣಾ (34) ಮತ್ತು ರಮಣ್ ದೀಪ್ ಸಿಂಗ್ (13) ಹೊರತು ಪಡಿಸಿದರೆ ಉಳಿದಾವ ಬ್ಯಾಟರ್ ಮೊತ್ತ ಎರಡಂಕಿ ಮೊತ್ತ ದಾಟಲೇ ಇಲ್ಲ. ಅಂತಿಮವಾಗಿ ಕೆಕೆಆರ್ ತಂಡ 18.4 ಓವರ್ ನಲ್ಲಿ 168 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 110 ರನ್ ಅಂತರದಲ್ಲಿ ಹೀನಾಯ ಸೋಲಿನೊಂದಿಗೆ ಹಾಲಿ ಟೂರ್ನಿಯ ತನ್ನ ಜರ್ನಿ ಅಂತ್ಯಗೊಳಿಸಿತು.
ದಾಖಲೆಗಳ ಸರಣಿ
ಇನ್ನು ಈ ಪಂದ್ಯದ ಗೆಲುವಿನೊಂದಿಗೆ ಸನ್ ರೈಸೃರ್ಸ್ ಹೈದರಾಬಾದ್ ತಂಡ ಹಲವು ದಾಖಲೆಗಳನ್ನು ಬರೆದಿದೆ.
3ನೇ ವೇಗದ ಶತಕ
ಈ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸನ್ 37 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಜಂಟಿ ಮೂರನೇ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು ಆರ್ ಸಿಬಿ ಪರ ಕ್ರಿಸ್ ಗೇಯ್ಲ್ 30 ಎಸೆತಗಳಲ್ಲೇ ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
ಇದೇ ಸರಣಿಯಲ್ಲಿ ಗುಜರಾತ್ ವಿರುದ್ಧ ರಾಜಸ್ತಾನ ತಂಡ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಸಿಡಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದ್ದಾರೆ. ಈ ಹಿಂದೆ 2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಇದೇ ರಾಜಸ್ತಾನ ವಿರುದ್ಧ ಯೂಸುಫ್ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಮತ್ತು ನಿನ್ನೆ ಕ್ಲಾಸನ್ ಸಿಡಿಸಿದ 37 ಎಸೆತೆಗಳ ಶತಕ ಜಂಟಿ 3ನೇ ಸ್ಥಾನದಲ್ಲಿವೆ.
ಕೆಕೆಆರ್ ವಿರುದ್ಧ ಮೊದಲ ಗೆಲುವು
ಈ ಹಿಂದೆ ಕೆಕೆಆರ್ ವಿರುದ್ಧ ಸತತ 5 ಪಂದ್ಯಗಳಲ್ಲಿ ಸೋಲು ಕಂಡಿದ್ದ ಹೈದರಾಬಾದ್ ತಂಡ ಕೊನೆಗೂ ತನ್ನ ಸೋಲಿನ ಸರಪಳಿ ಕಳಚಿಕೊಂಡಿತು. ಐಪಿಎಲ್ ಟೂರ್ನಿಯಲ್ಲಿ ಸತತ ಐದು ಸೋಲುಗಳ ನಂತರ SRH ತಂಡವು KKR ವಿರುದ್ಧ ಮೊದಲ ಗೆಲುವು ಸಾಧಿಸಿದೆ.
ಕೆಕೆಆರ್ ಗೆ ಅತೀ ದೊಡ್ಡ ಸೋಲು
ಇನ್ನು 110 ರನ್ ಅಂತರದ ಸೋಲು ಐಪಿಎಲ್‌ನಲ್ಲಿ KKR ತಂಡದ ಅತಿದೊಡ್ಡ ಸೋಲಾಗಿದೆ, 2018 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ MI ವಿರುದ್ಧ 102 ರನ್‌ಗಳ ಅಂತರದಿಂದ ಸೋತಿದ್ದು ಇದಕ್ಕೂ ಮೊದಲು ಅತಿ ದೊಡ್ಡ ಸೋಲಾಗಿದೆ. ಅಂತೆಯೇ 2019 ರಲ್ಲಿ ಹೈದರಾಬಾದ್‌ನಲ್ಲಿ RCB ವಿರುದ್ಧ 118 ರನ್‌ಗಳ ಅಂತರದಿಂದ ಜಯಗಳಿಸಿದ ನಂತರ SRH ತಂಡವು ಗಳಿಸಿದ ಎರಡನೇ ಅತಿ ದೊಡ್ಡ ಗೆಲುವು ಇದಾಗಿದೆ.
ಐಪಿಎಲ್ ಇತಿಹಾಸದ 3ನೇ ಗರಿಷ್ಟ ಸ್ಕೋರ್
ಇನ್ನು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕಲೆಹಾಕಿದ 278ರನ್ ಗಳು ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ ಇದೇ ಸನ್ ರೈಸರ್ಸ್ ಹೈದರಾಬಾದ್ ತಂಡ ಆರ್ ಸಿಬಿ ವಿರುದ್ಧ 287 ರನ್ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದ ತಂಡವೊಂದರ ಗರಿಷ್ಠ ಸ್ಕೋರ್ ಆಗಿದೆ. ಬಳಿಕ ರಾಜಸ್ತಾನ ವಿರುದ್ಧ ಇದೇ ಹೈದರಾಬಾದ್ ತಂಡ 286 ರನ್ ಕಲೆಹಾಕಿತ್ತು. ಇದು 2ನೇ ಗರಿಷ್ಠ ಸ್ಕೋರ್ ಆಗಿದೆ.
ಐಪಿಎಲ್ top 5 ಗರಿಷ್ಠ ಸ್ಕೋರ್ ಗಳ ಪೈಕಿ 4 SRH ನದ್ದೇ
ಇನ್ನು ಐಪಿಎಲ್ ಇತಿಹಾಸದ ಟಾಪ್ 5 ಗರಿಷ್ಠ ಸ್ಕೋರ್ ಗಳ ಪೈಕಿ ಟಾಪ್ 4 ಸನ್ ರೈಸರ್ಸ್ ಹೈದರಾಬಾದ್ ನದ್ದೇ ಎಂಬುದು ವಿಶೇಷ
Advertisement