'ಇದಕ್ಕಾಗಿಯೇ ಕಾಯುತ್ತಿದ್ದೆ...': ಭಾರತ ತಂಡದಲ್ಲಿ ಅವಕಾಶ ಪಡೆದ ನಂತರ ಕೊನೆಗೂ ಮೌನ ಮುರಿದ ಕನ್ನಡಿಗ ಕರುಣ್ ನಾಯರ್

ಕರುಣ್ ನಾಯರ್ ಅವರು ರಣಜಿ ಟ್ರೋಫಿಯಲ್ಲಿ, ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕಗಳೊಂದಿಗೆ 863 ರನ್ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ, ಎಂಟು ಇನಿಂಗ್ಸ್‌ಗಳಲ್ಲಿ ಐದು ಶತಕಗಳು ಸೇರಿದಂತೆ 779 ರನ್‌ಗಳನ್ನು ಗಳಿಸಿದ್ದಾರೆ.
ಕರುಣ್ ನಾಯರ್
ಕರುಣ್ ನಾಯರ್
Updated on

ಸುದೀರ್ಘ ಎಂಟು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಶನಿವಾರ ಸಂತಸ ವ್ಯಕ್ತಪಡಿಸಿದ್ದಾರೆ. 2024-25ರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಕರುಣ್, 'ಈ ಕರೆಗಾಗಿ ಕಾಯುತ್ತಿದ್ದೆ' ಎಂದಿದ್ದಾರೆ. 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಕೊನೆಯ ಬಾರಿಗೆ ಆಡಿದ್ದ ಕರುಣ್ ನಾಯರ್ ಅವರನ್ನು ನಂತರ ತಂಡದಿಂದ ಕೈಬಿಡಲಾಗಿತ್ತು. ವಿರೇಂದ್ರ ಸೆಹ್ವಾಗ್ ಬಳಿಕ ಭಾರತ ತಂಡಕ್ಕಾಗಿ ತ್ರಿಶತಕ ಗಳಿಸಿದ ಕರುಣ್ ನಾಯರ್, ಇಂತಹದ್ದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು.

'ಮತ್ತೆ ತಂಡಕ್ಕೆ ಮರಳಿದ್ದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ. ನಾನು ಟೀಂ ಇಂಡಿಯಾಗೆ ಆಯ್ಕೆಯಾಗಿರುವುದು ಒಳ್ಳೆಯ ವಿಚಾರ. ಈ ಕರೆಗಾಗಿ ನಾನು ಕಾತರದಿಂದ ಕಾಯುತ್ತಿದ್ದೆ, ಆಪ್ತರಿಂದ ಬಹಳಷ್ಟು ಸಂದೇಶಗಳು ಬಂದವು' ಎಂದು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಕರುಣ್ ನಾಯರ್ ಹೇಳಿದರು.

ರಣಜಿ ಟ್ರೋಫಿಯಲ್ಲಿ, ಅವರು ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕಗಳೊಂದಿಗೆ 863 ರನ್ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ, ಎಂಟು ಇನಿಂಗ್ಸ್‌ಗಳಲ್ಲಿ ಐದು ಶತಕಗಳು ಸೇರಿದಂತೆ 779 ರನ್‌ಗಳನ್ನು ಗಳಿಸಿದ್ದಾರೆ. ಇದುವೇ ಅವರು ಭಾರತೀಯ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿತು ಎಂದರೆ ತಪ್ಪಾಗಲಾರದು.

'ನಿಜವಾಗಿಯೂ ತುಂಬಾ ಸಂತೋಷವಾಗುತ್ತಿದೆ. ಕಳೆದ 12 ರಿಂದ 16 ತಿಂಗಳುಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಬೇರೆ ಯಾವುದಕ್ಕೂ ಹೆಚ್ಚಿನ ಗಮನ ಕೊಡದೆ ನನ್ನ ಬ್ಯಾಟಿಂಗ್‌ನತ್ತ ನಾನು ಗಮನ ಕೇಂದ್ರೀಕರಿಸಿದ್ದೆ. ಇದು ಈಗ ನನ್ನ ಪಾಲಿಗೆ ಉತ್ತಮ ಫಲಿತಾಂಶವನ್ನು ನೀಡಿದೆ' ಎಂದು ನಾಯರ್ ಹೇಳಿದರು.

ಕರುಣ್ ನಾಯರ್
IPL 2025: 'ಡಿಯರ್ ಕ್ರಿಕೆಟ್, ಮತ್ತೊಂದು ಅವಕಾಶ ಕೊಡು': ಮೂರು ವರ್ಷಗಳ ನಂತರ ಐಪಿಎಲ್‌ಗೆ ಮರಳಿದ ಕನ್ನಡಿಗ ಕರುಣ್ ನಾಯರ್!

33 ವರ್ಷದ ಬ್ಯಾಟರ್ ಕರುಣ್ ನಾಯರ್ ಅವರ ಅತ್ಯುತ್ತಮ ಪ್ರದರ್ಶನವು 2024-25ರ ಆವೃತ್ತಿಯಲ್ಲಿ ವಿದರ್ಭ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕರುಣ್ ನಾಯರ್ ಅವರ ಆಯ್ಕೆ ಬಗ್ಗೆ ಮಾತನಾಡಿದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, 'ಕರುಣ್ ನಾಯರ್ ಸಾಕಷ್ಟು ರನ್ ಗಳಿಸಿದ್ದಾರೆ. ಕೌಂಟಿ ಕ್ರಿಕೆಟ್ ಆಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಲ್ಲದಿರುವುದರಿಂದ, ತಂಡದಲ್ಲಿ ಅನುಭವಿಗಳ ಕೊರತೆಯಿದ್ದು, ಅವರ ಅನುಭವ ಸಹಾಯಕ್ಕೆ ಬರುತ್ತದೆ ಎಂದು ಭಾವಿಸಿದ್ದೇವೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com