
ಲಾಹೋರ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬಿಸಿಯಾಗಿದ್ದ ಆಟಗಾರನೋರ್ವ ಫೈನಲ್ ಪಂದ್ಯ ಆರಂಭಕ್ಕೆ ಕೇವಲ 10 ನಿಮಿಷ ಮುಂಚೆ ಬಂದು ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟ ನಾಟಕೀಯ ಘಟನೆ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ನಲ್ಲಿ ನಡೆದಿದೆ.
ನಿನ್ನೆ ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಿಎಸ್ಎಲ್ ಫೈನಲ್ ಪಂದ್ಯದಲ್ಲಿ ಈ ಡ್ರಮಾಟಿಕ್ ಘಟನೆ ನಡೆದಿದ್ದು, ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕ್ವೆಟಾ ಗ್ಲಾಡಿಯೇಟರ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತ್ತು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಲಾಹೋರ್ ಗ್ಲಾಡಿಯೇಟರ್ಸ್ ತಂಡ 19.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 204ರನ್ ಸಿಡಿಸಿ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ 2025ರ ಪಿಎಸ್ ಎಲ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಈ ಪಂದ್ಯದಲ್ಲಿ ಲಾಹೋರ್ ತಂಡದ ಗೆಲುವಿನ ರೂವಾರಿಯಾಗಿದ್ದು ಜಿಂಬಾಬ್ವೆ ತಂಡ ಸ್ಟಾರ್ ಬ್ಯಾಟರ್ ಸಿಕಂದರ್ ರಾಜಾ.. ಅಂತಿಮ ಕ್ಷಣದಲ್ಲಿ ಬ್ಯಾಟಿಂಗ್ ಇಳಿದು ಲಾಹೋರ್ ಪರ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 22 ರನ್ ಚಚ್ಚಿ ಲಾಹೋರ್ ತಂಡ ಗೆಲುವಿಗೆ ಕಾರಣರಾದರು. ಇದೇ ಪಂದ್ಯದಲ್ಲಿ 31 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ ಅಜೇಯ 62 ರ ನ್ ಗಳಿಸಿದ ಶ್ರೀಲಂಕಾದ ಕುಶಾಲ್ ಪೆರೆರಾ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಈ ಗೆಲುವಿನೊಂದಿಗೆ, ಲಾಹೋರ್ ತಂಡವು ತನ್ನ ಮೂರನೇ PSL ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಕ್ಕೂ ಮೊದಲು ಲಾಹೋರ್ 2022 ಮತ್ತು 2023 ರಲ್ಲಿ ಪ್ರಶಸ್ತಿಗೆ ಭಾಜನವಾಗಿತ್ತು. ಆ ಮೂಲಕ PSL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಕೀರ್ತಿಗೆ ಭಾಜನವಾಗಿದ್ದು ಅಲ್ಲದೇ ಅತೀ ಹೆಚ್ಚು ಪ್ರಶಸ್ತಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್ ತಂಡದ ದಾಖಲೆ ಸರಿಗಟ್ಟಿದೆ.
ಪಂದ್ಯ ಆರಂಭಕ್ಕೆ 10 ನಿಮಿಷ ಇದ್ದಾಗ ತಂಡ ಸೇರಿಕೊಂಡಿದ್ದ ಸಿಕಂದರ್ ರಾಜಾ
ಇನ್ನು ಈ ಫೈನಲ್ ಪಂದ್ಯ ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿ ಅತ್ಯಂತ ನಾಟಕೀಯ ಅಂತ್ಯ ಕಂಡ ಪಂದ್ಯಗಳಲ್ಲಿ ಪ್ರಮುಖವಾಗಿದೆ. ಈ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ಜಿಂಬಾಬ್ವೆಯ ಸಿಕಂದರ್ ರಾಜಾ ಪಾಲ್ಗೊಳ್ಳುತ್ತಾರೆ ಎಂದು ತಂಡದ ನಿರ್ವಹಣಾ ಸಿಬ್ಬಂದಿಗೆ ಸ್ಪಷ್ಟತೆಯೇಇರಲಿಲ್ಲ.
ಏಕೆಂದರೆ ಪಂದ್ಯ ಆರಂಭಕ್ಕೆ ಅಂತಿಮ ಕ್ಷಣಗಳಿದ್ದಾಗಲೂ ಸಿಕಂದರ್ ರಾಜಾ ತಂಡ ಸೇರಿಕೊಂಡಿರಲಿಲ್ಲ. ಕಾರಣ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಅದಾಗ್ಯೂ ಬಿಡುವು ಮಾಡಿಕೊಂಡು ಫೈನಲ್ ಗೆ ಆಗಮಿಸುತ್ತಿದ್ದರು.
ಇಂಗ್ಲೆಂಡ್‌ನಿಂದ ವಿಮಾನದಲ್ಲಿ ಬಂದು ಟಾಸ್‌ಗೆ ಕೇವಲ 10 ನಿಮಿಷಗಳ ಮೊದಲು ಗಡಾಫಿ ಕ್ರೀಡಾಂಗಣಕ್ಕೆ ಬಂದರು ಎಂದು ತಂಡದ ಮೂಲಗಳು ತಿಳಿಸಿವೆ.
ದುಬೈನಲ್ಲಿ ಬ್ರೇಕ್ ಫಾಸ್ಟ್, ಬರ್ಮಿಂಗ್ ಹ್ಯಾಮ್ ನಲ್ಲಿ ಮಧ್ಯಾಹ್ನದ ಊಟ, ರಾತ್ರಿ ಲಾಹೋರ್ ನಲ್ಲಿ ಗೆಲುವಿನ ಡಿನ್ನರ್
ಇನ್ನೂ ಅಚ್ಚರಿ ಎಂದರೆ ಪಿಎಸ್ ಎಲ್ ಫೈನಲ್ ಆಡಲು ಸಿಕಂದರ್ ರಾಜಾ ಹರಸಾಹಸವನ್ನೇ ಪಟ್ಟಿದ್ದಾರೆ. ಇಂಗ್ಲೆಂಡ್ ನಿಂದ ವಿಮಾನದಲ್ಲಿ ಹೊರಟ ಸಿಕಂದರ್ ರಾಜಾ, ದುಬೈನಲ್ಲಿ ಬ್ರೇಕ್ ಫಾಸ್ಟ್ ಮಾಡಿದ್ದರು. ಬಳಿಕ ಬರ್ಮಿಂಗ್ ಹ್ಯಾಮ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ಸಂಜೆ ಫೈನಲ್ ಪಂದ್ಯ ಆರಂಭವಾಗುವ ಹೊತ್ತಿಗೇ ಲಾಹೋರ್ ಸೇರಿಕೊಂಡಿದ್ದರು. ಬಳಿಕ ಫೈನಲ್ ನಲ್ಲಿ ಗೆಲುವಿನ ನಾಕ್ ಆಡಿ ರಾತ್ರಿ ಲಾಹೋರ್ ನಲ್ಲಿ ಗೆಲುವಿನ ಡಿನ್ನರ್ ಮಾಡಿದ್ದಾರೆ.
ಈ ಕುರಿತು ಹಾಸ್ಯಮಯವಾಗಿಯೇ ಉತ್ತರಿಸಿರುವ ಸಿಕಂದರ್ ರಾಜಾ, 'ಇಂತಹ ಜೀವನವನ್ನು ನಡೆಸಲು ನಾನು ಧನ್ಯನಾಗಿದ್ದೇನೆ" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಅಂದಹಾಗೆ ಐಪಿಎಲ್ ಗೆ ಸರಿಸಮಾನವಾಗಿ ಆರಂಭವಾಗಿದ್ದ ಪಿಎಸ್ ಎಲ್ ಪಹಲ್ಗಾಮ್ ಉಗ್ರ ದಾಳಿ ಮತ್ತು ಭಾರತೀಯ ಸೇನೆ ಪಾಕಿಸ್ತಾನದಲ್ಲಿ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಉಭಯ ದೇಶಗಳು ಕದನ ವಿರಾಮ ಘೋಷಣೆ ಬಳಿಕ ಮತ್ತೆ ಟೂರ್ನಿ ಆರಂಭವಾಗಿತ್ತು.
Advertisement