
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅದ್ಭುತ ಜಯ ಸಾಧಿಸಿದ್ದು, ಮಾಜಿ ಮಾಲೀಕ ವಿಜಯ್ ಮಲ್ಯ ತಂಡವನ್ನು ಅಭಿನಂದಿಸಿದ್ದಾರೆ. ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ RCBಗೆ ಅಭಿನಂದನೆ ಸಲ್ಲಿಸಿ ಪೋಸ್ಟ್ ಮಾಡಿದ್ದಾರೆ.
ವಿಜಯ್ ಮಲ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. RCB ಯನ್ನು ಹೊಗಳಿ ಮಾಡಿರುವ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಟ್ರೋಲ್ ಮಾಡಿದ್ದಾರೆ. ಮೊದಲು ಕಾನೂನು ಕ್ರಮಗಳನ್ನು ಎದುರಿಸಲು ಭಾರತಕ್ಕೆ ಹಿಂತಿರುಗಿ ಎಂದಿದ್ದಾರೆ.
'ಇಂದು ರಾತ್ರಿ ಎಲ್‌ಎಸ್‌ಜಿ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಮತ್ತು ಐಪಿಎಲ್‌ನಲ್ಲಿ ತವರಿನಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳಲ್ಲಿ ಜಯಗಳಿಸಿದ ದಾಖಲೆ ಬರೆದಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು' ಎಂದು ಮಲ್ಯ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
'ಆಶಾದಾಯಕವಾಗಿ, ಬಲವಾದ ಮೊಮೆಂಟಮ್ ಮತ್ತು ಪ್ರಮುಖ ಆಟಗಾರರ ಮರಳುವಿಕೆಯು ಆರ್‌ಸಿಬಿಯು ಐಪಿಎಲ್ ಟ್ರೋಫಿಗೆ ಹೋಗುವ ದಾರಿಯಲ್ಲಿ ಧೈರ್ಯದಿಂದ ಆಡಲು ಅನುವು ಮಾಡಿಕೊಡುತ್ತದೆ' ಎಂದು ಅವರು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಆರ್‌ಸಿಬಿ ಐಪಿಎಲ್ 2025ರ ಕ್ವಾಲಿಫೈಯರ್ 1ಕ್ಕೆ ಪ್ರವೇಶಿಸಿತು. ಮೇ 29ರಂದು ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೆಣಸಲಿದೆ.
ಮಲ್ಯ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, 'ಫೈನಲ್ ದೇಖ್ನೆ ಆವೋ ಇಂಡಿಯಾ (ಫೈನಲ್ ಪಂದ್ಯವನ್ನು ವೀಕ್ಷಿಸಲು ಭಾರತಕ್ಕೆ ಬನ್ನಿ)' ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, 'ದಯವಿಟ್ಟು ಪ್ಲೇಆಫ್‌ಗಳನ್ನು ವೀಕ್ಷಿಸಲು ಭಾರತಕ್ಕೆ ಬನ್ನಿ!!' ಎಂದು ಕಮೆಂಟ್ ಮಾಡಿದ್ದಾರೆ. ಮೂರನೆಯವರು, 'ಕಮ್‌ಬ್ಯಾಕ್ ಟು ಇಂಡಿಯಾ ಮ್ಯಾನ್' ಎಂದು ಬರೆದಿದ್ದಾರೆ. ನಾಲ್ಕನೆಯವರು, 'ನೀವು ಯಾವಾಗ ಬರುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ.
ಮಲ್ಯ ಅವರು ಸದ್ಯ ಲಂಡನ್‌ನಲ್ಲಿ ವಾಸಿಸುತ್ತಿದ್ದು, ಸಾಲ ಮರುಪಾವತಿ ಮಾಡದ ಆರೋಪದ ಮೇಲೆ ಭಾರತವು ಅವರನ್ನು ಹಸ್ತಾಂತರಿಸುವುಂತೆ ಕೇಳಿದೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದಲ್ಲಿ ಹಲವು ಪ್ರಕರಣಗಳಿವೆ.
Advertisement