
ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವೀಕ್ಷಕ ವಿವರಣೆಗಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಕ ರಿಷಭ್ ಪಂತ್ ಅವರ ಅದ್ಭುತ ಶತಕದ ನೆರವಿನಿಂದ ಲಕ್ನೋ ತಂಡ 227 ರನ್ ಕಲೆಹಾಕಿತು. ಇದಕ್ಕಾಗಿ ಆರ್‌ಸಿಬಿ ಬೌಲರ್‌ಗಳನ್ನು ಕಾಮೆಂಟೇಟರ್ಸ್ ಟೀಕಿಸಿದ್ದರು.
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಆಟದ ಪರಿಸ್ಥಿತಿಗಳನ್ನು ವಿಶ್ಲೇಷಿಸುವ ಬದಲು ಬೌಲರ್‌ಗಳನ್ನು ಟೀಕಿಸುವುದರಲ್ಲೇ ವೀಕ್ಷಕ ವಿವರಣೆಗಾರರು ಅತಿಯಾದ ಗಮನ ಹೊಂದಿದ್ದರು ಎಂದು ಡಿವಿಲಿಯರ್ಸ್ ಟೀಕಿಸಿದರು. ಟಾಪ್ 2ರಲ್ಲಿ ಸ್ಥಾನ ಪಡೆಯಲು ಇದು ಆರ್‌ಸಿಬಿಗೆ ಮಹತ್ವದ ಗೆಲುವಾಗಿತ್ತು.
'ನಿನ್ನೆ ರಾತ್ರಿ ನಾನು ಕಾಮೆಂಟೇಟರ್‌ಗಳ ಮಾತುಗಳನ್ನು ಕೇಳಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರ ಮಾತುಗಳು ನನಗೆ ತುಂಬಾ ಕೋಪ ತರಿಸಿತು. ಆರ್‌ಸಿಬಿ ಬೌಲಿಂಗ್ ಮಾಡುವಾಗ ಅವರು ತುಂಬಾ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಅವರು 'ಆರ್‌ಸಿಬಿಯ ಬೌಲಿಂಗ್ ಒತ್ತಡದಲ್ಲಿದೆ. ಅವರಿಗೆ ಒತ್ತಡ ನಿರ್ವಹಿಸಲು ಆಗುತ್ತಿಲ್ಲ ಎಂದು ಅವರು ಹೇಳುತ್ತಲೇ ಇದ್ದರು. ಫಾರ್ಮ್‌ನಲ್ಲಿದ್ದ ತಂಡವು ಮೊಮೆಂಟಮ್ ಅನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳುತ್ತಿದ್ದರು. ಆದರೆ, ಬಹುಶಃ ಇದು ನಿಜವಾಗಿಯೂ ಉತ್ತಮ ಬ್ಯಾಟಿಂಗ್ ವಿಕೆಟ್ ಆಗಿರಬಹುದು, ಅಲ್ಲವೇ? ತುಂಬಾ ಬುದ್ಧಿವಂತ ಮತ್ತು ತೀಕ್ಷ್ಣ ಕಾಮೆಂಟೇಟರ್‌ಗಳಿಗೆ ಹೇಳುವುದೇನೆಂದರೆ, ಇದು ಬ್ಯಾಟಿಂಗ್‌ಗೆ ಅತ್ಯುತ್ತಮ ಪಿಚ್ ಆಗಿರುವ ಸಾಧ್ಯತೆಯನ್ನು ಪರಿಗಣಿಸುವುದು ಹೇಗೆ?' ಎಂದು ಡಿವಿಲಿಯರ್ಸ್ ಯೂಟ್ಯೂಬ್‌ನಲ್ಲಿ ತಮ್ಮ ವಾರದ ಕಾರ್ಯಕ್ರಮದಲ್ಲಿ ಹೇಳಿದರು.
'ಆರ್‌ಸಿಬಿ ಬೌಲಿಂಗ್ ಘಟಕವು ಮತ್ತೊಮ್ಮೆ ಕಳಪೆ ಫಾರ್ಮ್‌ನಲ್ಲಿದೆ ಎಂದು ಅವರು ಹೇಳಿದರು. ಪಂದ್ಯವನ್ನು ವೀಕ್ಷಿಸುತ್ತಲೇ ನಾನು ಯೋಚಿಸಿದೆ: ಕೆಲವೊಮ್ಮೆ ವೀಕ್ಷಕ ವಿವರಣೆಗಾರರು ಸಿದ್ಧ ನಿರೂಪಣೆಯ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಹೌದು, ಆರ್‌ಸಿಬಿ ಎಂದಿಗೂ ಪ್ರಶಸ್ತಿ ಗೆದ್ದಿಲ್ಲ. ಆದರೆ, ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ವಿಶ್ಲೇಷಿಸದೆ, 'ಬೌಲರ್‌ಗಳು ವಿಫಲರಾಗುತ್ತಿದ್ದಾರೆ, ಅವರು ನಿಷ್ಪ್ರಯೋಜಕರು' ಎಂದು ಹೇಳುತ್ತಲೇ ಇರುವುದು ಸೋಮಾರಿತನ. ಪಿಚ್ ಕಠಿಣವಾಗಿದ್ದರೆ ರಿಷಭ್ ಪಂತ್ 60 ಎಸೆತಗಳಲ್ಲಿ 118 ರನ್ ಗಳಿಸುತ್ತಿರಲಿಲ್ಲ. ಆ ಪಿಚ್‌ನಲ್ಲಿ ಎಲ್ಲ ಎಲ್‌ಎಸ್‌ಜಿ ಬ್ಯಾಟ್ಸ್‌ಮನ್‌ಗಳು ಅಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು' ಎಂದು ಹೇಳಿದರು.
'ಹೌದು, ಕೆಲವೊಮ್ಮೆ ಕಳಪೆ ಬೌಲಿಂಗ್ ಇತ್ತು. ಆದರೆ, ಒಟ್ಟಾರೆ ಪ್ರದರ್ಶನವನ್ನು ಸಂದರ್ಭಕ್ಕೆ ತಕ್ಕಂತೆ ನೋಡಬೇಕು. ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರವಲ್ಲದ ಪಿಚ್‌ನಲ್ಲಿ 227 ರನ್‌ಗಳನ್ನು ಗಳಿಸುವುದು ಸಾಧ್ಯವೇ? ಇದರಿಂದ ಅದು ಉತ್ತಮ ಬ್ಯಾಟಿಂಗ್ ಪಿಚ್ ಎಂಬುದು ತಿಳಿಯುತ್ತದೆ. ಈ ಸವಾಲುಗಳ ಹೊರತಾಗಿಯೂ, ಆರ್‌ಸಿಬಿ ಭರ್ಜರಿ ಜಯ ಸಾಧಿಸಿತು' ಎಂದು ಅವರು ಹೇಳಿದರು.
Advertisement