ಮಂಗಳವಾರ ನಡೆದ ಐಪಿಎಲ್ 2025ರ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಸ್ಪಿನ್ನರ್ ದಿಗ್ವೇಶ್ ರಾಠಿ ಅವರನ್ನು ಅಪಹಾಸ್ಯ ಮಾಡಿದರು. ಆರ್‌ಸಿಬಿ ಎಲ್‌ಎಸ್‌ಜಿಯನ್ನು ಸೋಲಿಸಿ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆದುಕೊಂಡಿತು.
17ನೇ ಓವರ್‌ನಲ್ಲಿ, ಜಿತೇಶ್ ಎರಡು ಬಾರಿ ಔಟ್ ಆಗುವ ಸಾಧ್ಯತೆ ಇತ್ತು. ದಿಗ್ವೇಶ್ ರಾಠಿ ಅವರ ಮೊದಲ ಎಸೆತದಲ್ಲಿ ಆಯುಷ್ ಬದೋನಿ ಅವರ ಕೈಗೆ ಚೆಂಡು ಹೋಗಿತ್ತು. ಅಷ್ಟೊತ್ತಿಗಾಗಲೇ ದಿಗ್ವೇಶ್ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದರು. ಆದರೆ, ದಿಗ್ವೇಶ್ ತಮ್ಮ ಬ್ಯಾಕ್‌ಫೂಟ್‌ನಿಂದ ರಿಟರ್ನ್ ಕ್ರೀಸ್ ಅನ್ನು ದಾಟಿದ್ದರು. ಇದರ ಪರಿಣಾಮವಾಗಿ ನೋ ಬಾಲ್ ಆಯಿತು. ಮುಂದಿನ ಎಸೆತದಲ್ಲಿ, ಜಿತೇಶ್ ಸಿಕ್ಸ್ ಬಾರಿಸಿ ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು.
ಮತ್ತೊಂದು ಎಸೆತದ ವೇಳೆ ದಿಗ್ವೇಶ್ ನಾನ್-ಸ್ಟ್ರೈಕರ್ ಕಡೆಯಲ್ಲಿ ರನೌಟ್ ಮಾಡಲು ಮುಂದಾದರು. ಜಿತೇಶ್ ಅವರ ಬ್ಯಾಟ್ ಕ್ರೀಸ್ ದಾಟುವ ಮೊದಲೇ ಬೇಲ್ಸ್ ಹೊತ್ತಿಕೊಂಡಿತು. ಆದರೆ, ಲಕ್ನೋ ನಾಯಕ ರಿಷಭ್ ಪಂತ್ ಅಪೀಲ್ ಅನ್ನು ಹಿಂತೆಗೆದುಕೊಂಡ ನಂತರ ಅವರು ಔಟ್ ಆಗದೆ ಉಳಿದರು. ಪಂತ್ ಅಪೀಲ್ ಅನ್ನು ಹಿಂಪಡೆಯದಿದ್ದರೂ, ಜಿತೇಶ್ ನಾಟ್ ಔಟ್ ಆಗಿರುತ್ತಿದ್ದರು. ಏಕೆಂದರೆ, ದಿಗ್ವೇಶ್ ಬೇಲ್ಸ್ ಅನ್ನು ಬೀಳಿಸುವ ಮೊದಲೇ ಪಾಪಿನ್ ಕ್ರೀಸ್ ದಾಟಿದ್ದರು.
ಪಂದ್ಯದ ನಂತರ, ಆರ್‌ಸಿಬಿ ಅಭಿಮಾನಿಗಳು ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ದಿಗ್ವೇಶ್ ಅವರ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಅಣಕಿಸಿದರು.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರು ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್‌ಗಳಲ್ಲಿ 227 ರನ್ ಗಳಿಸಿತು. ನಾಯಕ ರಿಷಭ್ ಪಂತ್ ಅವರ ಆಕರ್ಷಕ ಅರ್ಧಶತಕ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು.
ಲಕ್ನೋ ನೀಡಿದ 228 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭಿಕರಾಗಿ ಬಂದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದ್ದರು. ಬಳಿಕ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಬಂದ ನಾಯಕ ಜಿತೇಶ್ ಶರ್ಮಾ ಮಯಾಂಕ್ ಅಗರ್ವಾಲ್ ಜೊತೆ ಅತ್ಯುತ್ತಮ ಜೊತೆಯಾಟವಾಡಿದರು. ಜಿತೇಶ್ 33 ಎಸೆತಗಳಲ್ಲಿ 85 ರನ್ ಗಳಿಸಿದರೆ, ಮಯಾಂಕ್ 23 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗಿ ಉಳಿದರು.
ವಿರಾಟ್ ಕೊಹ್ಲಿ ಮತ್ತು ನಾಯಕ ಜಿತೇಶ್ ಅವರ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಆರು ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿದ್ದು, 19 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.
ಇಂದು ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವೆ ಕ್ವಾಲಿಫೈಯರ್ 1 ನಡೆಯಲಿದ್ದು, ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಡಲಿದೆ. ಸೋತ ತಂಡವು ಜೂನ್ 1 ರಂದು ಅದೇ ಸ್ಥಳದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.
Advertisement