
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಕ್ವಾಲಿಫೈಯರ್ 1ಕ್ಕೆ ವೇದಿಕೆ ಸಜ್ಜಾಗಿದ್ದು, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಗುರುವಾರ ಮುಲ್ಲನ್ಪುರದಲ್ಲಿ ಸೆಣಸಲಿವೆ. ಸೋಮವಾರ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಸೋಲಿಸುವ ಮೂಲಕ ಪಿಬಿಕೆಎಸ್ ಟೇಬಲ್ ಟಾಪರ್ ಆಯಿತು. ಮಂಗಳವಾರ ನಡೆದ ಐಪಿಎಲ್ 2025ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಅದ್ಭುತ ಜಯ ಸಾಧಿಸಿದ ನಂತರ ಆರ್‌ಸಿಬಿ ಎರಡನೇ ಸ್ಥಾನಕ್ಕೇರಿತು. ಎರಡೂ ತಂಡಗಳು 14 ಪಂದ್ಯಗಳಿಂದ 19 ಅಂಕಗಳನ್ನು ಪಡೆದಿದ್ದು, ಉತ್ತಮ ನೆಟ್ ರನ್ ರೇಟ್‌ನಿಂದಾಗಿ ಪಿಬಿಕೆಎಸ್ ತಂಡ ಅಗ್ರಸ್ಥಾನದಲ್ಲಿದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಕ್ವಾಲಿಫೈಯರ್ 1ಕ್ಕೆ ಯಾವುದೇ ಮೀಸಲು ದಿನಾಂಕವಿಲ್ಲ. ಹೀಗಾಗಿ ಮುಲ್ಲನ್‌ಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನಾಗಬಹುದು ಎಂಬುದರ ಕುರಿತು ತಿಳಿಯೋಣ...
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಟಾಪರ್ ಆಗಿರುವ ಪಂಜಾಬ್ ಕಿಂಗ್ಸ್ ತಂಡವು ಫೈನಲ್‌ಗೆ ನಿರಾಯಾಸವಾಗಿ ಮುನ್ನಡೆಯುತ್ತದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡದೊಂದಿಗೆ ಸೆಣಸಬೇಕಿದೆ.
ಆರ್‌ಸಿಬಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡದ ವಿರುದ್ಧ ಆಡಬೇಕಿದೆ.
ಅಂಕ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ತಂಡಗಳು ಕ್ವಾಲಿಫೈಯರ್‌ನಲ್ಲಿ ಸೋತರು ಅಥವಾ ಮಳೆ ಅಡ್ಡಿಪಡಿಸಿದರೂ ಫೈನಲ್ ತಲುಪಲು ಮತ್ತೊಂದು ಅವಕಾಶ ಇರುತ್ತದೆ. ರಿಕಿ ಪಾಂಟಿಂಗ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ 2014ರ ನಂತರ ಇದೇ ಮೊದಲ ಬಾರಿಗೆ ಪ್ಲೇ-ಆಫ್‌ಗೆ ಪ್ರವೇಶ ಪಡೆದಿದೆ.
ಮತ್ತೊಂದೆಡೆ, ಆರ್‌ಸಿಬಿ ಈ ಬಾರಿ ತಮ್ಮ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಆಶಯವನ್ನು ಹೊಂದಿದೆ. ಎರಡೂ ತಂಡಗಳೂ ಕೂಡ ಈವರೆಗೆ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ, ಉಭಯ ತಂಡಗಳಿಗೆ ಟ್ರೋಫಿ ಗೆಲ್ಲುವ ಮಹದಾಸೆಯಿದೆ.
Advertisement