
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ ಬ್ಯಾಟಿಂಗ್ ವೈಫಲ್ಯದ ನಂತರ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಟೀಕಿಸಿದ್ದಾರೆ. ಕೇವಲ ಎರಡು ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, ಜಾಶ್ ಹೇಜಲ್‌ವುಡ್ ಅವರ ಎಸೆತದಲ್ಲಿ ಔಟ್ ಆದರು. ಗುರುವಾರ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು. ಇದನ್ನು ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲಿಯೇ ಗುರಿ ಮುಟ್ಟಿತು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಅಯ್ಯರ್ ತನ್ನ ಅಹಂಕಾರವನ್ನು ಜೇಬಿನಲ್ಲಿಟ್ಟುಕೊಂಡು ಮುಂದುವರಿಯಬೇಕು. ಪಂಜಾಬ್ ತಂಡದ ನಾಯಕ ಆಟದ ಪರಿಸ್ಥಿತಿ ಮತ್ತು ತನ್ನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಟಿ20ಗಳಲ್ಲಿ, ಅಯ್ಯರ್ ಅವರನ್ನು ಆಸ್ಟ್ರೇಲಿಯಾದ ಬೌಲರ್ 4 ಬಾರಿ ಔಟ್ ಮಾಡಿದ್ದಾರೆ. ಆದರೆ, ಅವರು ಎದುರಿಸಿದ 22 ಎಸೆತಗಳಲ್ಲಿ ಕೇವಲ 11 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಡಿ ಹೇಳಿದ್ದಾರೆ.
'ಕೆಲವೊಮ್ಮೆ, ನೀವು ನಿಮ್ಮ ಅಹಂಕಾರವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ ಎಂಬುದಕ್ಕೆ ಅದು ಪರಿಪೂರ್ಣ ಉದಾಹರಣೆಯಾಗಿದೆ. ಹೆಮ್ಮೆಯನ್ನಷ್ಟೇ ತಲೆಯಲ್ಲಿಟ್ಟುಕೊಂಡು ಮುಂದುವರಿಯುವ ಬದಲು ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ನೀವು ಹೇಜಲ್‌ವುಡ್ ಅನ್ನು ಹೊರಗೆ ನೋಡಬೇಕಾಗಿತ್ತು' ಎಂದು ಹೇಳಿದರು.
ಆತಿಥೇಯರು ಪಂದ್ಯದ ಆರಂಭದಲ್ಲೇ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿದ್ದರು. ಇದರಿಂದಾಗಿ ಶ್ರೇಯಸ್ ಅಯ್ಯರ್ ಇನಿಂಗ್ಸ್ ಅನ್ನು ಕಟ್ಟುವ ಜವಾಬ್ದಾರಿ ಹೊಂದಿದ್ದರು. ಆದರೆ, ಪರಿಸ್ಥಿತಿಯ ಒತ್ತಡದಲ್ಲಿ, ಅಯ್ಯರ್ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿ ವಿಕೆಟ್ ಕೈಚೆಲ್ಲಿದರು. ಎಡ್ಜ್ ಆಗಿದ್ದ ಚೆಂಡನ್ನು ಸ್ಟಂಪ್ ಹಿಂದೆ ಜಿತೇಶ್ ಶರ್ಮಾ ಕ್ಯಾಚ್ ಪಡೆದು ಅಯ್ಯರ್ ಅವರನ್ನು ಔಟ್ ಮಾಡಿದರು.
ಪಂಜಾಬ್ ತಂಡ ಕೇವಲ 101 ರನ್‌ಗಳಿಗೆ ಆಲೌಟ್ ಆಗಿದ್ದು, ಜಾಶ್ ಹೇಜಲ್‌ವುಡ್ ಮತ್ತು ಸುಯಾಶ್ ಶರ್ಮಾ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಮಾರ್ಕಸ್ ಸ್ಟೊಯಿನಿಸ್ 26 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು. ಪಂಜಾಬ್ ತಂಡ 14.1 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸುಯಾಶ್ 3 ಓವರ್‌ಗಳಲ್ಲಿ 3 ವಿಕೆಟ್ ಪಡೆದು 17 ರನ್ ನೀಡಿದರೆ, ಹೇಜಲ್‌ವುಡ್ 3.1 ಓವರ್‌ಗಳಲ್ಲಿ 3 ವಿಕೆಟ್ ಪಡೆದು 21 ರನ್ ನೀಡಿದರು.
ಫಿಲ್ ಸಾಲ್ಟ್ ಅವರ 50 ರನ್‌ಗಳು ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿಯೇ ಗುರಿಯನ್ನು ತಲುಪುವಂತೆ ಮಾಡಿತು. ಮಯಾಂಕ್ ಅಗರ್ವಾಲ್ 19 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 12 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ 2016ರ ನಂತರ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿತು.
Advertisement