
ಶುಕ್ರವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತರು ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆಯಲಿದ್ದು, ಫೈನಲ್‌ನಲ್ಲಿ ಸ್ಥಾನ ಪಡೆಯಲು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ. ಪಿಬಿಕೆಎಸ್ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ಫೈನಲ್ ತಲುಪಿದೆ.
ಸತತ ಎರಡು ಸೋಲುಗಳನ್ನು ಕಂಡಿರುವ ಗುಜರಾತ್ ಟೈಟಾನ್ಸ್ ತಂಡವು ಇದೀಗ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇತ್ತ ಎಂಐ ಕೂಡ ಉತ್ತಮ ಫಾರ್ಮ್‌ನಲ್ಲಿತ್ತು. ಆದರೆ, ಕೊನೆಯ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದ್ದು, ಇದೀಗ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ಸಮಯದಲ್ಲಿ ಮುಲ್ಲನ್‌ಪುರದಲ್ಲಿ ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಹೀಗಾಗಿ, ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಮತ್ತು 25 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯಬಹುದು.
ಗುರುವಾರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೂ ಯಾವುದೇ ಮಳೆ ಭೀತಿ ಎದುರಾಗಿರಲಿಲ್ಲ. ಎಲಿಮಿನೇಟರ್ ಪಂದ್ಯವೂ ಅಲ್ಲಿಯೇ ನಡೆಯಲಿರುವುದರಿಂದ ಸದ್ಯ ಮಳೆ ಅಡ್ಡಿಯಾಗುವುದಿಲ್ಲ ಎಂದು ತಿಳಿದುಬಂದಿದೆ.
ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್ 2ಗೆ ಮುನ್ನಡೆಯುತ್ತದೆ. ಮುಂಬೈ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವುದರಿಂದ ಟೂರ್ನಿಯಿಂದ ಹೊರಗುಳಿಯಲಿದೆ.
ಐಪಿಎಲ್ ಎಲಿಮಿನೇಟರ್‌ಗೆ ಮೀಸಲು ದಿನವಿದೆಯೇ?
ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಇಟ್ಟಿಲ್ಲ. ಹೀಗಾಗಿ ಮಳೆಯು ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಕ್ವಾಲಿಫೈಯರ್ 2 ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಪಂಜಾಬ್ ಕಿಂಗ್ಸ್ ಜೊತೆಗೆ ಎಲಿಮಿನೇಟರ್ ಗೆದ್ದ ತಂಡ ಸೆಣಸಲಿದೆ.
Advertisement