ಶುಕ್ರವಾರ ಮುಲ್ಲನ್‌ಪುರದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡ 20 ರನ್ ಅಂತರದ ಸೋಲು ಕಂಡಿದ್ದು, ಈ ಮೂಲಕ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು. ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಗುಜರಾತ್ ಟೈಟಾನ್ಸ್ ಪಂದ್ಯಾವಳಿಯ ಕೊನೆಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ನಿರಾಶಾದಾಯಕ ಪ್ರದರ್ಶನ ನೀಡಿತು. ಮುಂಬೈ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಂಡ ಗುಜರಾತ್ ಟೈಟಾನ್ಸ್ ಕೆಟ್ಟ ದಾಖಲೆ ಮೂಲಕ ಐಪಿಎಲ್ 2025ರ ಅಭಿಯಾನವನ್ನು ಮುಗಿಸಿದೆ.
ಕ್ರಿಕ್‌ಬಜ್ ಪ್ರಕಾರ, ಗುಜರಾತ್ ಟೈಟಾನ್ಸ್ ಐಪಿಎಲ್ 2025ರಲ್ಲಿ 28 ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಇತರ ತಂಡಗಳಿಗಿಂತ ಹೆಚ್ಚಿನ ಕ್ಯಾಚ್‌ಗಳನ್ನು ಬಿಟ್ಟ ತಂಡ ಎಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ. 2ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಿದ್ದು, 24 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಐಪಿಎಲ್ 2025ರ ಆವೃತ್ತಿಯ ಮೊದಲಾರ್ಧದ ನಂತರ ಅತ್ಯಂತ ಕೆಟ್ಟ ಫೀಲ್ಡಿಂಗ್ ಘಟಕ ಎಂದು ಕರೆಯಲ್ಪಟ್ಟ ಸಿಎಸ್‌ಕೆ ಕೇವಲ 22 ಕ್ಯಾಚ್‌ಗಳನ್ನು ಕೈಬಿಟ್ಟಿದೆ.
ಎಲಿಮಿನೇಟರ್‌ನಲ್ಲಿ ಮುಂಬೈ ತಂಡದ ಇನಿಂಗ್ಸ್‌ನ ಆರಂಭದಲ್ಲಿಯೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಜಿಟಿಗೆ ಎರಡು ಸುವರ್ಣ ಅವಕಾಶಗಳು ಸಿಕ್ಕಿದ್ದವು. ಆದರೆ, ಕ್ಯಾಚ್ ಕೈಬಿಟ್ಟಿದ್ದರಿಂದಾಗಿ ಹೆಚ್ಚಿನ ಬೆಲೆ ತೆರುವಂತಾಯಿತು. ಪಂದ್ಯದ 2ನೇ ಓವರ್‌ನಲ್ಲಿ ಕೋಟ್ಜೀ ರೋಹಿತ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಮುಂದಿನ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಎಡ್ಜ್ ಆಗಿದ್ದಾಗ ವಿಕೆಟ್ ಕೀಪರ್ ಕುಶಾಲ್ ಮೆಂಡಿಸ್ ಕ್ಯಾಚ್ ಕೈಚೆಲ್ಲಿದರು.
ಬಳಿಕ ರೋಹಿತ್ 50 ಎಸೆತಗಳಲ್ಲಿ 81 ರನ್ ಗಳಿಸಿದರು. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ರೀತಿಯಲ್ಲಿ, 12ನೇ ಓವರ್‌ನಲ್ಲಿ ಮೆಂಡಿಸ್ ಮತ್ತೊಂದು ಕ್ಯಾಚ್ ಕೈಬಿಟ್ಟರು. ಆಗ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಉಳಿಯಿತು.
ಮುಂಬೈ ನೀಡಿದ 229 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಜಿಟಿ, ಮೊದಲ ಓವರ್‌ನಲ್ಲಿಯೇ ಶುಭಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಸಾಯಿ ಸುದರ್ಶನ್ (49 ಎಸೆತಗಳಲ್ಲಿ 80) ಕುಶಾಲ್ ಮೆಂಡಿಸ್ ಅವರೊಂದಿಗೆ 64 ರನ್‌ಗಳ ಜೊತೆಯಾಟ ಮತ್ತು ನಂತರ ವಾಷಿಂಗ್ಟನ್ ಸುಂದರ್ ಅವರೊಂದಿಗೆ 84 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಆದರೆ, ಅವರ ವಿಕೆಟ್ ಕಳೆದುಕೊಂಡ ನಂತರ ಜಿಟಿ ಸೋಲು ಕಾಣುವಂತಾಯಿತು.
Advertisement