

ನವೆಂಬರ್ 2ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣಾ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 52 ರನ್‌ಗಳ ಜಯ ಸಾಧಿಸುವ ಮೂಲಕ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಕಪಿಲ್ ದೇವ್ ಮತ್ತು ಎಂಎಸ್ ಧೋನಿ ನಂತರ ನಾಯಕಿಯಾಗಿ ಏಕದಿನ ವಿಶ್ವಕಪ್ ಗೆದ್ದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದಾರೆ.
ಭಾರತದ ಐತಿಹಾಸಿಕ ಮಹಿಳಾ ವಿಶ್ವಕಪ್ ಗೆಲುವನ್ನು ನೆನಪಿಟ್ಟುಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಇದೀಗ ವಿಶೇಷ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಭಾರತದ ನಾಯಕಿ ತಮ್ಮ ಬೈಸೆಪ್ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡು, ವಿಶ್ವಕಪ್ ಗೆಲುವನ್ನು ಸದಾ ತನ್ನೊಟ್ಟಿಗೆ ಇಟ್ಟುಕೊಳ್ಳಲು ತೀರ್ಮಾನಿಸಿದ್ದಾರೆ.
ವಿಶ್ವಕಪ್ ಟ್ರೋಫಿಯ ಚಿತ್ರವನ್ನು ಟ್ಯೂಟೂ ಹಾಕಿಸಿಕೊಂಡಿದ್ದು, ಇದು ಅವರ ವೃತ್ತಿಜೀವನದ ಅತಿದೊಡ್ಡ ಸಾಧನೆಯ ಸಂಕೇತವಾಗಿದೆ. ಅವರು ಇನ್‌ಸ್ಟಾಗ್ರಾಂನಲ್ಲಿ ಟ್ಯಾಟೂ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ನನ್ನ ಚರ್ಮ ಮತ್ತು ಹೃದಯದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಮೊದಲ ದಿನದಿಂದಲೂ ನಾನು ನಿನಗಾಗಿ ಕಾಯುತ್ತಿದ್ದೆ ಮತ್ತು ಈಗ ನಾನು ಪ್ರತಿದಿನ ಬೆಳಿಗ್ಗೆ ನಿನ್ನನ್ನು ಭೇಟಿಯಾಗುತ್ತೇನೆ ಮತ್ತು ಕೃತಜ್ಞಳಾಗಿರುತ್ತೇನೆ' ಎಂದು ಬರೆದಿದ್ದಾರೆ.
ಇದು 2009ರಲ್ಲಿ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಪ್ರಾರಂಭವಾದ ದೀರ್ಘ ಮತ್ತು ಅರ್ಥಪೂರ್ಣ ಪ್ರಯಾಣದ ಸಂಕೇತವಾಗಿದೆ. ಇದು ಅವರ ಬೆಳವಣಿಗೆ, ಸಾಧನೆಗಳು ಮತ್ತು ಅವರ ವೃತ್ತಿಜೀವನದ ಪ್ರಮುಖ ಅಧ್ಯಾಯದ ಪೂರ್ಣಗೊಳಿಸುವಿಕೆಯನ್ನು ಪ್ರತಿನಿಧಿಸುತ್ತದೆ.
Advertisement