

ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ಮೂಲಕ ಪ್ರಪಂಚದಾದ್ಯಂತ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ 'ಫಿಲಂಸ್ ಈಗ ಕ್ರೀಡಾ ಲೋಕ ಪ್ರವೇಶಿಸಲು ಸಜ್ಜಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯನ್ನು ಖರೀದಿಸುವ ಮಾತುಗಳು ಕೇಳಿಬರುತ್ತಿವೆ.
ಮಾರುಕಟ್ಟೆಯಲ್ಲಿ 2 ಬಿಲಿಯನ್ ಮೌಲ್ಯ ಹೊಂದಿರುವ RCB
ಮೂಲಗಳ ಪ್ರಕಾರ ಸದ್ಯದ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ ತಂಡವನ್ನು ಮಾರಾಟ ಮಾಡಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ. ವಿಜಯ್ ಮಲ್ಯ ನಂತರ RCB ಮಾಲೀಕತ್ವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಪಾಲಾಗಿತ್ತು. ಈಗ USL ಹೊರಬರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹೊಸ ಮಾಲೀಕರ ಹುಡುಕಾಟ ಆರಂಭವಾಗಿದೆ. ಇದರಲ್ಲಿ ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೆಸರೂ ಕೇಳಿಬರುತ್ತಿದೆ.
ಖರೀದಿ ರೇಸ್ ನಲ್ಲಿ ಇರುವವರು
ಶಿವಮೊಗ್ಗ ಮೂಲದ ಉದ್ಯಮಿ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಗ್ರೂಪ್‌ನ ರಂಜನ್ ರೈ ಅವರ ಹೆಸರುಗಳೂ ಸಹ ಸ್ಪರ್ಧೆಯಲ್ಲಿ ಇದ್ದರೂ, ಹೊಂಬಾಳೆ ಹೆಸರೇ ಮುಂಚೂಣಿಯಲ್ಲಿರುವುದಾಗಿ ವರದಿಯಾಗಿದೆ.
ಹೊಂಬಾಳೆ ಫಿಲಂಸ್ ಹಿನ್ನೆಲೆ: ಹೊಂಬಾಳೆ ಫಿಲಂಸ್ ಈಗಾಗಲೇ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳ ಮೂಲಕ ಸಾವಿರಾರು ಕೋಟಿ ವ್ಯವಹಾರ ನಡೆಸಿ, ಭಾರತ ಸೇರಿದಂತೆ ಜಗತ್ತಿನ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೃತಿಕ್ ರೋಷನ್ ನಟನೆಯ ಬೃಹತ್ ಹಿಂದುಸ್ತಾನಿ ಪ್ರಾಜೆಕ್ಟ್ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಈಗ ಸದ್ದಿಲ್ಲದೇ ಆರ್ ಸಿಬಿ ಖರೀದಿಗೆ ಮುಂದಾಗಿದೆ.
ಕೆಜಿಎಫ್ ಮತ್ತು ಕಾಂತಾರ ಸಿನಿಮಾ ಬಿಡುಗಡೆಯ ಸಮಯದಲ್ಲಿ RCB ಟೀಂ ಮತ್ತು ಹೊಂಬಾಳೆ ಫಿಲಂಸ್ ನಡುವೆ ಒಪ್ಪಂದ ಆಗಿತ್ತು. ಕೆಜಿಎಫ್ ನಟ ಸಂಜಯ್ ದತ್, ರವೀನಾ ಟಂಡನ್, ನಿರ್ಮಾಪಕ ವಿಜಯ್ ಕಿರಗಂದೂರು, ಮತ್ತು ರಿಷಬ್ ಶೆಟ್ಟಿ RCB ಜೆರ್ಸಿ ಧರಿಸಿ ಸ್ಟೇಡಿಯಂನಲ್ಲಿ ಹಾಜರಾಗಿದ್ದರು. RCB ಪಂದ್ಯಾವಳಿಗಳ ಸಮಯದಲ್ಲಿ ಹೊಂಬಾಳೆ ತಂಡವು ಪ್ರೋಮೋ ವಿಡಿಯೋಗಳನ್ನೂ ಮಾಡಿಸಿತ್ತು. ಈ ಹಿನ್ನೆಲೆಯಲ್ಲಿ ಹೊಂಬಾಳೆ ಮತ್ತು RCB ಒಟ್ಟಾದರೆ ಕ್ರೇಜ್ ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಅಭಿಮಾನಿಗಳ ನಡುವೆ ವ್ಯಕ್ತವಾಗುತ್ತಿದೆ.
RCB ಮಾಲೀಕತ್ವ ಬದಲಾವಣೆ ಅವಧಿ: 2026 ಮಾರ್ಚ್ 31ರೊಳಗೆ RCB ಮಾಲೀಕತ್ವ ಬದಲಾವಣೆಯಾಗಬೇಕಿದೆ. ಈ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್ ಆರ್ ಸಿಬಿ ಖರೀದಿಸಿದರೆ ಅದು ಕನ್ನಡಿಗರ ಖುಷಿ ಮತ್ತಷ್ಟು ಹೆಚ್ಚಾಗಲಿದೆ. RCBಗೆ ಕನ್ನಡ ಸಂಸ್ಥೆಯೇ ಮಾಲೀಕರಾದರೆ “ನಮ್ಮ ಟೀಂ, ನಮ್ಮ ಹೆಮ್ಮೆ” ಅನ್ನೋ ಅಭಿಮಾನ ಮತ್ತಷ್ಟು ಬಲಗೊಳ್ಳಲಿದೆ. ಅಷ್ಟೇ ಅಲ್ಲ, ಹೊಂಬಾಳೆ ಫಿಲಂಸ್ RCBಯಲ್ಲಿಯೇ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಕೊಹ್ಲಿಯ ಜೀವನಾಧಾರಿತ ಬಯೋಪಿಕ್ ಸಿನಿಮಾ ತಯಾರಿಸಬಹುದು ಎಂಬ ಊಹಾಪೋಹಗಳೂ ಚರ್ಚೆಯಲ್ಲಿವೆ.
17 ವರ್ಷಗಳ ನಿರೀಕ್ಷೆಯ ಬಳಿಕ ಆರ್‌ಸಿಬಿ ಕಳೆದ ಜೂನ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಅಹ್ಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದ ನಂತರ ಬೆಂಗಳೂರಿನಲ್ಲಿ ನಡೆದ ತಂಡದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಅಂತೆಯೇ 50 ಮಂದಿ ಗಾಯಗೊಂಡಿದ್ದರು.
Advertisement