

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 159 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 37/1 ರನ್ ಗಳಿಸಿತ್ತು. ಎರಡನೇ ದಿನ ಆಟ ಆರಂಭಿಸಿದ ಭಾರತದ ಇನ್ನಿಂಗ್ಸ್ 189ಕ್ಕೆ ಅಂತ್ಯಗೊಂಡಿತ್ತು. ಭಾರತ ದಕ್ಷಿಣ ಆಫ್ರಿಕಾಕ್ಕಿಂತ 30 ರನ್‌ಗಳ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟ ನಡೆಸಿತು. ಆದರೆ ಎರಡನೇ ದಿನದಾಟದ ಅಂತ್ಯಕ್ಕೆ 93 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದು 63 ರನ್ ಮುನ್ನಡೆ ಸಾಧಿಸಿದೆ. ಆದರೆ ಆಫ್ರಿಕಾ ಏಳು ವಿಕೆಟ್ ಕಳೆದುಕೊಂಡಿರುವುದರಿಂದ ಟೀಂ ಇಂಡಿಯಾ ಪಂದ್ಯದ ಮೇಲೆ ಬಲವಾದ ಹಿಡಿತವನ್ನು ಹೊಂದಿರುವಂತೆ ತೋರುತ್ತಿದೆ.
ಆಟದ ಎರಡನೇ ದಿನದಂದು, ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ಅನ್ನು 37/1 ಕ್ಕೆ ಪುನರಾರಂಭಿಸಿತು. ಕ್ರೀಸ್‌ನಲ್ಲಿರುವ ಕೆಎಲ್ ರಾಹುಲ್ 39 ರನ್ ಗಳಿಸಿ ಔಟಾದರೆ ವಾಷಿಂಗ್ಟನ್ ಸುಂದರ್ 29 ರನ್ ಗಳಿಸಿದರು. 4 ರನ್ ಗಳಿಸಿದ್ದ ಶುಭ್ಮನ್ ಗಿಲ್ 4 ರನ್ ಗಳಿಸಿದ್ದಾಗ ಚೆಂಡು ಬಡಿದು ರಿಟೈರ್ಡ್ ಹರ್ಟ್ ಆದರು. ಇನ್ನು ರಿಷಬ್ ಪಂತ್ 27, ರವೀಂದ್ರ ಜಡೇಜಾ 27, ಧ್ರುವ್ ಜುರೆಲ್ 14, ಅಕ್ಸರ್ ಪಟೇಲ್ 16 ರನ್ ಗಳಿಸಿ ಔಟಾದರು. ನಿರಂತರ ವಿಕೆಟ್ ಪತನದ ನಡುವೆ, ಟೀಮ್ ಇಂಡಿಯಾ ಇನ್ನಿಂಗ್ಸ್ 189 ರನ್‌ಗಳಿಗೆ ಸರ್ವಪತನ ಕಂಡಿತು.
ಎರಡನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾದ ಕಳಪೆ ಪ್ರದರ್ಶನ ಮುಂದೂವರೆಯಿತು. ರಯಾನ್ ರಿಕೆಲ್ಟನ್ 11, ಮಾರ್ಕಾಮ್ 4, ವಿಯಾನ್ ಮುಲ್ಡರ್ 11, ಮಾರ್ಕೊ ಜಾನ್ಸೆನ್ 13 ರನ್ ಗಳಿಸಿ ಔಟಾದರು. ನಾಯಕ ಟೆಂಬಾ ಬವುಮಾ ಅಜೇಯ 29 ರನ್ ಗಳಿಸಿ ಆಡುತ್ತಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ಭಾರತದ ಪರ ರವೀಂದ್ರ ಜಡೇಜಾ 4, ಕುಲ್ದೀಪ್ ಯಾದವ್ 2, ಅಕ್ಸರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.
Advertisement