

ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಬಹುದಾಗಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಕೈ ಚೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ 93 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆಯೊಂದನ್ನು ಬರೆದಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 189 ರನ್ ಕಲೆಹಾಕಿತು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 153 ರನ್ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ನಲ್ಲಿನ 30 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 124 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 30 ರನ್ಗಳಿಂದ ಸೋಲನುಭವಿಸಿದೆ.
ಈ ಮೂಲಕ ಟೀಮ್ ಇಂಡಿಯಾಗೆ ತವರಿನಲ್ಲಿ ಹೀನಾಯ ಸೋಲುಣಿಸಿದ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ.
93 ವರ್ಷಗಳ ಹೀನಾಯ ದಾಖಲೆ
ಭಾರತ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಬರೋಬ್ಬರಿ 93 ವರ್ಷಗಳಾಗಿದ್ದು, ಭಾರತ ತಂಡವು ಈ ಅತ್ಯಲ್ಪ ಮೊತ್ತವನ್ನು ಬೆನ್ನತ್ತಲಾಗದೇ ಸೋತು ಭಾರೀ ಮುಖಭಂಗ ಅನುಭವಿಸಿದೆ. ಭಾರತ ತಂಡವು ತವರು ಮೈದಾನದಲ್ಲಿ ಒಮ್ಮೆಯೂ 130 ಕ್ಕಿಂತ ಕಡಿಮೆ ಗುರಿಯನ್ನು ಬೆನ್ನತ್ತಲಾಗದೇ ಸೋತ ಚರಿತ್ರೆಯೇ ಇರಲಿಲ್ಲ.
2024 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ 147 ರನ್ಗಳ ಗುರಿ ಬೆನ್ನತ್ತಲಾಗದೇ ಟೀಮ್ ಇಂಡಿಯಾ 25 ರನ್ಗಳಿಂದ ಸೋತಿದ್ದು ತವರಿನಲ್ಲಿನ ಹೀನಾಯ ಸೋಲಾಗಿತ್ತು. ಇದೀಗ ಅದಕ್ಕಿಂತ ಕೆಟ್ಟ ದಾಖಲೆಯೊಂದನ್ನು ಟೀಮ್ ಇಂಡಿಯಾ ನಿರ್ಮಿಸಿದೆ.
ಭಾರತದಲ್ಲಿನ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಗುರಿ ಪಡೆದು 100 ರನ್ಗಳಿಸಲಾಗದೇ ಟೀಮ್ ಇಂಡಿಯಾ ಸೋತಿರುವುದು ಇದೇ ಮೊದಲು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಭಾರತದ ಈ ಹೀನಾಯ ಸೋಲು ಕೂಡ ಇತಿಹಾಸ ಪುಟ ಸೇರಿದೆ.
Advertisement