

ಹುಬ್ಬಳ್ಳಿ: ಹಾಲಿ ರಣಜಿ ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಚಂಡೀಗಢ ವಿರುದ್ಧ ಇನ್ನಿಂಗ್ಸ್ ಮತ್ತು 185 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಹುಬ್ಬಳ್ಳಿಯ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆದ ಎಲೈಟ್ ಬಿ ಗ್ರೂಪ್ ನಲ್ಲಿ ಚಂಡೀಗಢ ತಂಡದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರ್ನಾಟಕ ಇನ್ನಿಂಗ್ಸ್ ಮತ್ತು 185 ರನ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡ ಕರುಣ್ ನಾಯರ್ (95), ಸ್ಮರಣ್ ರವಿಚಂದ್ರನ್ (227) ದ್ವಿಶತಕ, ಶ್ರೇಯಸ್ ಗೋಪಾಲ್ (62) ಮತ್ತು ಶಿಖರ್ ಶೆಟ್ಟಿ (59) ಅರ್ಧಶತಕಗಳ ನೆರವಿನಿಂದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 547 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿತ್ತು.
ಈ ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಚಂಡೀಗಢ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗೆ ಆಲೌಟ್ ಆಯಿತು. ಚಂಡೀಗಢ ಪರ ನಾಯಕ ಮನನ್ ವೋಹ್ರಾ (106) ಶತಕ ಸಿಡಿಸಿದರೆ, ಅರ್ಜುನ್ ಅಜಾದ್ (32) ಮತ್ತು ಗೌರವವ ಪುರಿ (32) ಕರ್ನಾಟಕದ ಎದುರು ಕ್ರೀಸ್ ನಲ್ಲಿ ನೆಲೆಯೂರುವ ಪ್ರಯತ್ನ ಮಾಡಿದರು.
ಆದರೆ ಕರ್ನಾಟಕದ ಶ್ರೇಯಸ್ ಗೋಪಾಲ್ ಬೌಲಿಂಗ್ ದಾಳಿಯ ಎದುರು ನಿಲ್ಲಲಾಗಲಿಲ್ಲ. ಅಂತಿಮವಾಗಿ ಚಂಡೀಘಡ ತಂಡ 222 ರನ್ ಗೇ ಆಲೌಟ್ ಆಯಿತು. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 7 ವಿಕೆಟ್ ಕಬಳಿಸಿದರೆ, ಶಿಖರ್ ಶೆಟ್ಟಿ 2 ಮತ್ತು ಮೊಹ್ಸಿನ್ ಖಾನ್ 1 ವಿಕೆಟ್ ಪಡೆದರು.
ಫಾಲೋಆನ್ ಹೇರಿದ ಕರ್ನಾಟಕ
ಮೊದಲ ಇನ್ನಿಂಗ್ಸ್ ಬಳಿಕ 325 ರನ್ ಹಿನ್ನಡೆಯಲ್ಲಿದ್ದ ಚಂಡೀಗಢ ತಂಡದ ಮೇಲೆ ಕರ್ನಾಟಕ ಫಾಲೋ ಆನ್ ಹೇರಿತು. ಇಲ್ಲಿಯೂ ಶಿಖರ್ ಶೆಟ್ಟಿ ಮತ್ತು ಶ್ರೇಯಸ್ ಗೋಪಾಲ್ ಜೋಡಿ ಮತ್ತೆ ಚಂಡಿಗಢ ತಂಡವನ್ನು ಕಾಡಿದರು.
ಶಿವಂ ಬಾಂಬ್ರಿ 43 ರನ್ ಮತ್ತು ರಾಜ್ ಬಾವಾ 27 ರನ್ ಗಳಿಸಿದ್ದು ಬಿಟ್ಟರೆ ಚಂಡೀಗಢದ ಉಳಿದಾವ ಬ್ಯಾಟರ್ ನಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮೂಡಿಬರಲಿಲ್ಲ. ಅಂತಿಮವಾಗಿ ಚಂಡೀಘಡ ತಂಡ 140 ರನ್ ಗಳಿಗೆ ಆಲೌಟ್ ಆಗಿ 185 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
2ನೇ ಇನಿಂಗ್ಸ್ ನಲ್ಲಿ ಕರ್ನಾಟಕದ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ಶಿಖರ್ ಶೆಟ್ಟಿ 5 ವಿಕೆಟ್ ಕಬಳಿಸಿದರು. ಕಾವೇರಪ್ಪ 1 ವಿಕೆಟ್ ಪಡೆದರು.
ಈ ಅದ್ಭುತ ಗೆಲುವಿನೊಂದಿಗೆ ಕರ್ನಾಟಕ ಅಂಕಪಟ್ಟಿಯಲ್ಲಿ 21 ಅಂಕಗಳೊಂದಿಗೆ +1.747 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈ ಹಿಂದೆ ಕೇರಳ ವಿರುದ್ಧವೂ ಕರ್ನಾಟಕ ಇನ್ನಿಂಗ್ಸ್ ಮತ್ತು 164 ರನ್ ಗಳ ಅಮೋಘ ಜಯ ದಾಖಲಿಸಿತ್ತು.
Advertisement