

ಇತ್ತೀಚಿಗೆ ಮಹಿಳಾ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ, ಮತ್ತೊಂದು ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ. ನವೆಂಬರ್ 23 ರಂದು ಸಂಗೀತ ಸಂಯೋಜಕ-ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಸ್ಮೃತಿಯ ಪಕ್ಕದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದಿದ್ದ ಪಲಾಶ್ ಅವರ ಫೋಟೋವು ದೇಶಾದ್ಯಂತ ಅಭಿಮಾನಿಗಳ ಹೃದಯ ಗೆದ್ದಿತ್ತು. ಅನೇಕರು ಇದನ್ನು ವಿವಾಹಪೂರ್ವದ ಅತ್ಯುತ್ತಮ ಉಡುಗೊರೆ" ಎಂದು ಕರೆದಿದ್ದರು. ಅಲ್ಲದೇ ಸ್ಮೃತಿಯ ಸಾಧನೆಗಳನ್ನು ಸಾರ್ವಜನಿಕವಾಗಿ ಗೌರವಿಸಿದ್ದಕ್ಕಾಗಿ ಪಲಾಶ್ ಅವರನ್ನು ಶ್ಲಾಘಿಸಿದ್ದರು.
2019 ರಲ್ಲಿ ಪ್ರಾರಂಭವಾಗಿದ್ದ ಇವರಿಬ್ಬರ ಪ್ರೇಮಕಥೆ, 2024 ರವರೆಗೆ ಯಾರಿಗೂ ಗೊತ್ತಿರಲಿಲ್ಲ. ಈಗ ಮದುವೆಯಲ್ಲಿ ಅಂತ್ಯಗೊಳ್ಳಲು ಸಜ್ಜಾಗಿದೆ. ನವೆಂಬರ್ 23 ರಂದು ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಮದುವೆಗೂ ಮುನ್ನ, ಮಂಧಾನಾ ಮಹಿಳಾ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಜೆಮಿಮಾ ರೊಡ್ರಿಗಸ್, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ಹಾಗೂ ಯುವ ತಾರೆ ಶ್ರೇಯಾಂಕಾ ಪಾಟೀಲ್ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ವೀಡಿಯೊದಲ್ಲಿ ಸ್ಟಾರ್ ಆಟಗಾರ್ತಿಯರು 'ಲಗೇ ರಹೋ ಮುನ್ನಾ ಭಾಯ್ ಚಿತ್ರದ "ಸಂಜೋ ಹೋ ಹಿ ಗಯಾ" ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಮಂಧಾನ ತನ್ನ ನಿಶ್ಚಿತಾರ್ಥದ ಉಂಗುರವನ್ನು ತೋರಿಸುತ್ತಿರುವುದನ್ನು ಕಾಣಬಹುದು.
ಯಾರಿದು ಪಲಾಶ್ ಮುಚ್ಚಲ್ ?
ಪಲಾಶ್ ಮುಚ್ಚಲ್ ಅವರ ಸಂಗೀತ ಸಂಯೋಜಕ ಹಾಗೂ ನಿರ್ಮಾಪಕರಾಗಿದ್ದು, 29 ವರ್ಷದ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಲಾಶ್ ಅವರ ಅಕ್ಕ ಪಾಲಕ್ ಮುಚ್ಚಲ್, ಬಾಲಿವುಡ್ ಗಾಯಕಿಯಾಗಿದ್ದು, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಸೇರಿದಂತೆ ಅನೇಕ ನಟರ ವಿವಿಧ ಚಿತ್ರಗಳಲ್ಲಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅಲ್ಲದೇ ಅವರು ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಅಶುತೋಷ್ ಗೋವಾರಿಕರ್ ಅವರ ಖೇಲೀನ್ ಹಮ್ ಜೀ ಜಾನ್ ಸೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪಲಾಶ್ ಟಿ-ಸೀರೀಸ್, ಜೀ ಮ್ಯೂಸಿಕ್ ಕಂಪನಿ ಮತ್ತು ಪಾಲ್ ಮ್ಯೂಸಿಕ್‌ಗಾಗಿ 40 ಕ್ಕೂ ಹೆಚ್ಚು ಸಂಗೀತ ವೀಡಿಯೊಗಳನ್ನು ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಅವರು ರಿಕ್ಷಾ ಎಂಬ ವೆಬ್ ಸರಣಿಯನ್ನು ಸಹ ನಿರ್ದೇಶಿಸಿದ್ದಾರೆ ಮತ್ತು ಪ್ರಸ್ತುತ ರಾಜ್‌ಪಾಲ್ ಯಾದವ್ ಮತ್ತು ರುಬಿನಾ ದಿಲೈಕ್ ನಟಿಸಿರುವ "ಅರ್ಧ್" ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತೊಂದೆಡೆ, ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಮಹಿಳಾ ತಂಡ) ಹರಾಜಿನಲ್ಲಿ 3.40 ಕೋಟಿ ರೂ.ಗೆ ಖರೀದಿಸಿದೆ.
Advertisement