ಗುವಾಹಟಿ: ಶನಿವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಶುಕ್ರವಾರ ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಗಿಲ್ ಕುತ್ತಿಗೆ ಸೆಳೆತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಗಿಲ್ ಅವರ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ.
'ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯದಿಂದ ಬಳಲುತ್ತಿದ್ದ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರನ್ನು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಕೋಲ್ಕತ್ತಾ ಟೆಸ್ಟ್ ಪಂದ್ಯದ 2ನೇ ದಿನದಂದು ಗಿಲ್ ಕುತ್ತಿಗೆ ಸೆಳೆತಕ್ಕೆ ಒಳಗಾದರು ಮತ್ತು ದಿನದ ಆಟ ಮುಗಿದ ನಂತರ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ವೀಕ್ಷಣೆಯಲ್ಲಿ ಇರಿಸಲಾಯಿತು ಮತ್ತು ಮರುದಿನ ಬಿಡುಗಡೆ ಮಾಡಲಾಯಿತು. ಅವರು ನವೆಂಬರ್ 19 ರಂದು ಗುವಾಹಟಿಗೆ ಪ್ರಯಾಣ ಬೆಳೆಸಿದರು' ಎಂದು ಹೇಳಿಕೆ ತಿಳಿಸಿದೆ.
'ದುರದೃಷ್ಟವಶಾತ್, ಅವರು 2ನೇ ಟೆಸ್ಟ್‌ನಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಫಿಟ್ ಆಗಿಲ್ಲ ಮತ್ತು ಅವರ ಗಾಯದ ಹೆಚ್ಚಿನ ಮೌಲ್ಯಮಾಪನಕ್ಕಾಗಿ ಮುಂಬೈಗೆ ತೆರಳಲಿದ್ದಾರೆ' ಎಂದಿದೆ.
ಮುಂಬರುವ ಏಕದಿನ ಸರಣಿಯಲ್ಲಿ ಗಿಲ್ ಆಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
'ಪಂದ್ಯದ ಸಮಯದಲ್ಲಿ ಸೆಳೆತ ಮರುಕಳಿಸುವುದನ್ನು ನಾವು ಬಯಸುವುದಿಲ್ಲ' ಎಂದು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಗುರುವಾರ ಹೇಳಿದ್ದರು.
ಈಡನ್ ಗಾರ್ಡನ್ಸ್‌ನಲ್ಲಿ ಸ್ಮರಣೀಯ ಗೆಲುವಿನ ನಂತರ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Advertisement