

ಶುಕ್ರವಾರ ಬಾಂಗ್ಲಾದೇಶ ಎ ವಿರುದ್ಧದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025 ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಸೂಪರ್ ಓವರ್‌ಗೆ ಏಕೆ ಕಳುಹಿಸಲಿಲ್ಲ ಎಂಬುದರ ಕುರಿತು ಭಾರತ ಎ ತಂಡದ ನಾಯಕ ಜಿತೇಶ್ ಶರ್ಮಾ ವಿವರಿಸಿದರು. ಸೂಪರ್ ಓವರ್‌ನಲ್ಲಿ ರಮಣದೀಪ್ ಸಿಂಗ್ ಅವರೊಂದಿಗೆ ಜಿತೇಶ್ ಬ್ಯಾಟಿಂಗ್ ಮಾಡಲು ಬಂದರು. ಆದರೆ, ಮೊದಲ ಎಸೆತದಲ್ಲೇ ಡಕ್ ಔಟ್ ಆದರು. ನಂತರ ಬಂದ ಅಶುತೋಷ್ ಶರ್ಮಾ ಕೂಡ ಔಟ್ ಆದರು. ಭಾರತ ಒಂದೇ ಒಂದು ರನ್ ಗಳಿಸಲು ವಿಫಲವಾಯಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಂಗ್ಲಾದೇಶ ಒಂದು ವಿಕೆಟ್ ಕಳೆದುಕೊಂಡಿತು. ಆದರೆ, ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಸೋಲಿನ ನಂತರ, ಅದ್ಭುತ ಫಾರ್ಮ್ ಅನ್ನು ಪರಿಗಣಿಸಿ 14 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸದಿರುವ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು.
15 ಎಸೆತಗಳಲ್ಲಿ 38 ರನ್ ಗಳಿಸಿದ ವೈಭವ್ ಪವರ್‌ಪ್ಲೇ ಓವರ್‌ಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಡೆತ್ ಓವರ್‌ಗಳಲ್ಲಿ ಅಶುತೋಷ್ ಮತ್ತು ರಮಣದೀಪ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಜಿತೇಶ್ ಹೇಳಿದರು.
'ತಂಡದಲ್ಲಿ, ವೈಭವ್ ಮತ್ತು ಪ್ರಿಯಾಂಶ್ ಪವರ್‌ಪ್ಲೇನಲ್ಲಿ ನಿಪುಣರು. ಆದರೆ, ಡೆತ್ ಓವರ್‌ಗಳಲ್ಲಿ ಆಶು ಮತ್ತು ರಮಣ್ ತಮ್ಮ ಇಚ್ಛೆಯಂತೆ ಹೊಡೆಯಬಹುದು. ಆದ್ದರಿಂದ ಸೂಪರ್ ಓವರ್‌ನಲ್ಲಿ ಯಾರು ಆಡಬೇಕೆಂಬುದು ತಂಡದ ನಿರ್ಧಾರವಾಗಿತ್ತು ಮತ್ತು ನಾನು ಅಂತಿಮ ನಿರ್ಧಾರ ತೆಗೆದುಕೊಂಡೆ' ಎಂದು ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಜಿತೇಶ್ ಹೇಳಿದರು.
ಪಂದ್ಯಕ್ಕೆ ಬಂದಾಗ, ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನ ಸೆಮಿಫೈನಲ್‌ನಲ್ಲಿ ಸೂಪರ್ ಓವರ್‌ನಲ್ಲಿ ಬಾಂಗ್ಲಾದೇಶ ಎ ವಿರುದ್ಧ ಸೋತ ಭಾರತ ಎ ತಂಡವು ಟೂರ್ನಿಯಿಂದಲೇ ಹೊರಗುಳಿಯುವಂತಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಜಿತೇಶ್ ಶರ್ಮಾ ನೇತೃತ್ವದ ತಂಡವೂ ಕೂಡ ಅಷ್ಟೇ ರನ್ ಗಳಿಸಿದಾಗ ಸೂಪರ್ ಓವರ್ ಅನಿವಾರ್ಯವಾಯಿತು.
ಭಾರತವು ಸೂಪರ್ ಓವರ್‌ನಲ್ಲಿ ಜಿತೇಶ್, ಅಶುತೋಷ್ ಶರ್ಮಾ ಮತ್ತು ರಮಣದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು. ಈ ನಡೆ ತಿರುಗುಬಾಣವಾಯಿತು. ಜಿತೇಶ್ ಮತ್ತು ಅಶುತೋಷ್ ಇಬ್ಬರೂ ಸೂಪರ್ ಓವರ್‌ನಲ್ಲಿ ವೇಗಿ ರಿಪನ್ ಮಂಡೋಲ್ ಅವರ ಎಸೆತದಲ್ಲಿ ಔಟ್ ಆದರು.
ಮೊದಲ ಎಸೆತದಲ್ಲೇ ಯಾಸಿರ್ ಅಲಿಯನ್ನು ಕಳೆದುಕೊಂಡರೂ, ಲೆಗ್-ಸ್ಪಿನ್ನರ್ ಸುಯಾಶ್ ಶರ್ಮಾ ಎಸೆದ ವೈಡ್ ಬೌಲಿಂಗ್ ಮೂಲಕ ಬಾಂಗ್ಲಾದೇಶ ತಂಡವು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಅಗತ್ಯವಾದ ಒಂದು ರನ್ ಗಳಿಸಿತು.
Advertisement