

ಸಾಂಗ್ಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಭಾರತ ಕ್ರಿಕೆಟ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮದುವೆ ಮುಂದೂಡಿಕೆಯಾಗಿದೆ.
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭ ಹಠಾತ್ ಮುಂದೂಡಿಕೆಯಾಗಿದೆ.
ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಎರಡೂ ಕುಟುಂಬಸ್ಥರು ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಸಾಂಗ್ಲಿಯ ಸ್ಯಾಮ್ಡೋಲ್‌ನಲ್ಲಿರುವ ಮಂಧಾನ ಫಾರ್ಮ್ ಹೌಸ್‌ನಲ್ಲಿ ವಿವಾಹದ ಸಿದ್ಧತೆಗಳು ನಡೆಯುತ್ತಿರುವಾಗ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ.
ಶ್ರೀನಿವಾಸ್ ಮಂಧಾನ ಅವರನ್ನು ತಕ್ಷಣ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರನ್ನುತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಮೃತಿ ಮಂಧಾನ ಮತ್ತು ಅವರ ಹತ್ತಿರದ ಕುಟುಂಬ ಇಬ್ಬರೂ ಆಸ್ಪತ್ರೆಗೆ ಧಾವಿಸಿದರು ಎಂದು ಕುಟುಂಬದ ಆಪ್ತ ಮೂಲಗಳು ದೃಢಪಡಿಸಿವೆ.
ಪ್ರಸ್ತುತ, ಶ್ರೀನಿವಾಸ ಮಂಧಾನ ಅವರ ಸ್ಥಿತಿ ಸ್ಥಿರವಾಗಿದ್ದು ವೈದ್ಯರ ವೀಕ್ಷಣೆಯಲ್ಲಿದೆ ಎಂದು ಕುಟುಂಬ ತಿಳಿಸಿದೆ.
ಮದುವೆ ಮುಂದೂಡಿಕೆ
ಅಂತೆಯೇ ಸ್ಮೃತಿ ಮಂದಾನ ಮತ್ತು ಪಲಾಶ್ ಮುಚ್ಚಲ್ ಅವರ ಮದುವೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ವಿವಾಹ ಆಡಳಿತ ಮಂಡಳಿ ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದೆ. ವಿವಾಹ ಉತ್ಸವಗಳು ಯಾವಾಗ ಪುನರಾರಂಭವಾಗುತ್ತವೆ ಎಂಬುದು ಇನ್ನೂ ತಿಳಿದಿಲ್ಲ.
ಮದುವೆ ರದ್ದತಿಯ ಬಗ್ಗೆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನಡುವಿನ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಸ್ಯಾಮ್ಡೋಲ್ ವಿವಾಹ ಸ್ಥಳದಲ್ಲಿ ಅಲಂಕಾರಗಳನ್ನು ತೆಗೆದುಹಾಕುವ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಕಟ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಬೇಕಿತ್ತು. ಈ ವಿದ್ಯುಕ್ತ ಕಾರ್ಯಕ್ರಮಕ್ಕೆ ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಮಹಿಳಾ ಕ್ರಿಕೆಟ್ ಆಟಗಾರ್ತಿಯರೂ ಭಾಗಿಯಾಗಿದ್ದರು. ಕಳೆದ ಕೆಲ ದಿನಗಳಿಂದ ನಡೆಯುತ್ತಿರು ವಿವಾಹ ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದವು.
Advertisement