ಮದುವೆಯ ಸಂಭ್ರಮದಲ್ಲಿರಬೇಕಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಇದೀಗ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ತಂದೆ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ಬಳಿಕ ತಮ್ಮ ಮದುವೆಗೆ ಸಂಬಂಧಿಸಿದ ಆಚರಣೆಗಳ ಎಲ್ಲ ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ತೆಗೆದುಹಾಕಿದ್ದುು, ಇದೀಗ ವ್ಯಾಪಕ ಕುತೂಹಲ ಮನೆಮಾಡಿದೆ. ಅಲ್ಲದೆ, ತಮ್ಮ ಭಾವಿ ಪತಿಯಾದ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಯಾಗಿದ್ದಾರೆ. ಇದೀಗ ಸ್ಮೃತಿ ಅವರು ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು, ಪಲಾಶ್ ಅವರು ಪ್ರಪೋಸ್ ಮಾಡಿದ್ದ ವಿಡಿಯೋವನ್ನು ಕೂಡ ಅಳಿಸಲಾಗಿದೆ. ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕಾ ಪಾಟೀಲ್ ಅವರಂತಹ ಆಪ್ತ ಸ್ನೇಹಿತರು ಮತ್ತು ತಂಡದ ಸದಸ್ಯರು ಸಹ ವಿಡಿಯೋಗಳನ್ನು ಅಳಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಕೆಲವು ದಿನಗಳಿಂದ ಸ್ಮೃತಿ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ಬಹುತೇಕ ಎಲ್ಲರೂ ಗಮನಿಸುತ್ತಿದ್ದರು. ಇದೀಗ ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳು, ನಿಶ್ಚಿತಾರ್ಥದ ಘೋಷಣೆ, ರೀಲ್‌ಗಳು ಮತ್ತು ಪ್ರಪೋಸಲ್ ವಿಡಿಯೋ ಕೂಡ ಅವರ ಖಾತೆಯಿಂದ ಕಣ್ಮರೆಯಾಗಿವೆ. ಆದಾಗ್ಯೂ, ಪಲಾಶ್ ಅವರೊಂದಿಗಿನ ಹಿಂದಿನ ಕ್ಯಾಶುಯಲ್ ಫೋಟೊಗಳು ಅವರ ಇನ್‌ಸ್ಟಾಗ್ರಾಂನಲ್ಲಿ ಹಾಗೆಯೇ ಉಳಿದಿವೆ. ಜೆಮಿಮಾ ರೊಡ್ರಿಗಸ್ ಕೂಡ ನಿಶ್ಚಿತಾರ್ಥದ ವಿಡಿಯೋವನ್ನು ಅಳಿಸಿರುವುದು ಇದೀಗ ಚರ್ಚೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದೊಂದು ವಾರದಿಂದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿ ಮಂಧಾನ ಅವರ ಮದುವೆಗೆ ಸಂಬಂಧಿಸಿದ ಆಟರಣೆಗಳು ನಡೆಯುತ್ತಿದ್ದವು. ಮೆಹೆಂದಿ, ಸಂಗೀತ ಮತ್ತು ಹಳದಿ ಕಾರ್ಯಕ್ರಮಗಳು ಈಗಾಗಲೇ ನಡೆದಿದ್ದವು. ಅವುಗಳ ವಿಡಿಯೋಗಳನ್ನು ಸ್ಮೃತಿ ಸೇರಿದಂತೆ ಅವರ ಆಪ್ತರಾದ ಶ್ರೇಯಾಂಕಾ ಪಾಟೀಲ್ ಮತ್ತು ಜೆಮಿಮಾ ಹಂಚಿಕೊಂಡಿದ್ದರು.
ಭಾನುವಾರ ಮಧ್ಯಾಹ್ನದ ವೇಳೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಹೃದಯಾಘಾತದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾದ ಬಳಿಕ ಮದುವೆಯನ್ನು ಮುಂದೂಡಲಾಯಿತು. ಅದಾದ ಬಳಿಕ ಭಾವಿ ಪತಿ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಇದೀಗ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸದ್ಯ, ಶ್ರೀನಿವಾಸ್ ಮಂಧಾನ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರನ್ನು ನಿಗಾವಹಿಸಲಾಗುತ್ತಿದೆ ಎಂದು ಕುಟುಂಬ ತಿಳಿಸಿದೆ.
'ಭಾನುವಾರ ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದಾಗ, ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಅಸ್ವಸ್ಥರಾದರು. ಬಹುಶಃ ಇದು ಸಾಮಾನ್ಯ, ಅವರು ಚೆನ್ನಾಗಿಯೇ ಇದ್ದಾರೆ ಎಂದು ನಾವು ಸ್ವಲ್ಪ ಸಮಯ ಕಾಯ್ದೆವು. ಆದರೆ, ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಿದ್ದರಿಂದ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ವೀಕ್ಷಣೆಯಲ್ಲಿದ್ದಾರೆ' ಎಂದು ಸ್ಮೃತಿ ಅವರ ವ್ಯವಸ್ಥಾಪಕರು ನಿನ್ನೆ ಹೇಳಿದ್ದರು.
'ಸ್ಮೃತಿ ಅವರು ಅವರ ತಂದೆಯೊಂದಿಗೆ ತುಂಬಾ ಆಪ್ತರು ಎಂಬುದು ನಿಮಗೆ ತಿಳಿದಿದೆ. ಅವರ ತಂದೆ ಗುಣಮುಖರಾಗುವವರೆಗೆ, ಇಂದು ನಡೆಯಬೇಕಿದ್ದ ಈ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಅವರು ನಿರ್ಧರಿಸಿದ್ದಾರೆ. ಅವರು ಗುಣಮುಖರಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ನಾವು ಕೂಡ ಆಘಾತದಲ್ಲಿದ್ದೇವೆ ಮತ್ತು ಅವರು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದು ಅವರು ಹೇಳಿದರು.
ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ವಿವಾಹ ಸಂಭ್ರಮಾಚರಣೆಯಲ್ಲಿ ಸ್ಮೃತಿ ಅವರೊಂದಿಗೆ ಇದ್ದರು.
Advertisement