

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2 ಅಂತರದ ಸೋಲಿನ ಅಂಚಿನಲ್ಲಿ ಭಾರತ ತಂಡ ನಿಂತಿದ್ದು, ಅವರ ಭವಿಷ್ಯ ಅಪಾಯದಲ್ಲಿದೆ. ಮೂರು ಸ್ವರೂಪಗಳಲ್ಲಿ ತಂಡಕ್ಕೆ ತರಬೇತಿ ನೀಡುವ ಗೌತಮ್ ಗಂಭೀರ್, ಅಡಿಯಲ್ಲಿ ತಂಡವು ಇಲ್ಲಿಯವರೆಗೆ ಸಾಕಷ್ಟು ಕಳಪೆ ಪ್ರದರ್ಶನ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೀಗ ದೀರ್ಘಾವಧಿಯ ಸ್ವರೂಪಕ್ಕಾಗಿ ವಿಭಿನ್ನ ಆಯ್ಕೆಗಳ ಬಗ್ಗೆ ಆಲೋಚಿಸಬೇಕಿದೆ. ಭಾರತದ ಟೆಸ್ಟ್ ಕೋಚ್ ಗಂಭೀರ್ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ, ಐಸ್ಲ್ಯಾಂಡ್ ಕ್ರಿಕೆಟ್ ಗಂಭೀರ್ ಅವರನ್ನು ಅಪಹಾಸ್ಯ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ವಿಷಯಗಳ ಬಗ್ಗೆ ಹಾಸ್ಯಮಯ ನಿಲುವುಗಳಿಗೆ ಹೆಸರುವಾಸಿಯಾದ ಐಸ್ಲ್ಯಾಂಡ್ ಕ್ರಿಕೆಟ್, ಗೌತಮ್ ಗಂಭೀರ್ ಅಡಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದರಿಂದ ಅವರನ್ನು ತಮ್ಮ ತಂಡದ ಮುಖ್ಯ ಕೋಚ್ ಹುದ್ದೆಗೆ ಆಹ್ವಾನಿಸಲಾಗುವುದಿಲ್ಲ ಎಂದು ಹೇಳಿದೆ.
'ನಮ್ಮ ಎಲ್ಲ ಅಭಿಮಾನಿಗಳಿಗೆ, ಇಲ್ಲ, ಗೌತಮ್ ಗಂಭೀರ್ ಅವರನ್ನು ನಮ್ಮ ರಾಷ್ಟ್ರೀಯ ತಂಡದ ಹೊಸ ಕೋಚ್ ಆಗಲು ಆಹ್ವಾನಿಸುವುದಿಲ್ಲ. ಆ ಸ್ಥಾನ ಈಗಾಗಲೇ ಭರ್ತಿಯಾಗಿದೆ ಮತ್ತು ನಾವು 2025ರಲ್ಲಿ ನಮ್ಮ ಶೇ 75 ರಷ್ಟು ಪಂದ್ಯಗಳನ್ನು ಗೆದ್ದಿದ್ದೇವೆ' ಎಂದು ಐಸ್ಲ್ಯಾಂಡ್ ಕ್ರಿಕೆಟ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದೆ.
ಗಂಭೀರ್ ಅವರನ್ನು ವಜಾಗೊಳಿಸುವ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ಅಥವಾ ಸೂಚನೆ ನೀಡಿಲ್ಲವಾದರೂ, ಟೆಸ್ಟ್ ಮುಖ್ಯ ಕೋಚ್ ಹುದ್ದೆಯಿಂದ ಅವರನ್ನು ಕೆಳಗಿಳಿಸಲು ಒತ್ತಡ ಕೇಳಿಬರುತ್ತಿದೆ. ಇದೀಗ ಅಭಿಮಾನಿಗಳು ಮತ್ತು ಆಟದ ತಜ್ಞರಲ್ಲಿ ಚರ್ಚೆಯ ಕೇಂದ್ರಭಾಗವಾಗಿದೆ.
ಗಂಭೀರ್ ನೇತೃತ್ವದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತವರಿನಲ್ಲಿಯೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿ ವೈಟ್‌ವಾಶ್ ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ ಸಂಭಾವ್ಯ ಸರಣಿ ಸ್ವೀಪ್ ಸೇರಿದಂತೆ ಭಾರತ ತನ್ನ ಕೊನೆಯ ಆರು ತವರು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಸೋತಿದೆ.
2000ರಲ್ಲಿ ಭಾರತ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿತ್ತು. ಗುವಾಹಟಿ ಸರಣಿಯಲ್ಲಿ ಡ್ರಾ ಅಥವಾ ಸೋಲು ಎಂದಾದರೆ 25 ವರ್ಷಗಳಲ್ಲಿ ಪ್ರೋಟಿಯಸ್ ವಿರುದ್ಧ ಭಾರತ ತಂಡವು ತವರಿನಲ್ಲಿ ಅನುಭವಿಸಿದ ಮೊದಲ ಸರಣಿ ಸೋಲು ಇದಾಗಲಿದೆ.
ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸುವ ಮುಖ್ಯ ಕೋಚ್ ನಿರ್ಧಾರವು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮೊದಲ ಟೆಸ್ಟ್‌ನಲ್ಲಿ 3ನೇ ಸ್ಥಾನದಲ್ಲಿ ಆಡಿದ್ದ ವಾಷಿಂಗ್ಟನ್ ಸುಂದರ್ ಎರಡನೇ ಪಂದ್ಯದಲ್ಲಿ 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಟಿ20 ಕ್ರಿಕೆಟ್‌ನಲ್ಲಿ ಇಂತಹ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆಯಾದರೂ, ಟೆಸ್ಟ್‌ಗಳಿಗೆ ಹೆಚ್ಚು ಸಂಘಟಿತ ವಿಧಾನದ ಅಗತ್ಯವಿದೆ ಎಂದು ಅನೇಕ ತಜ್ಞರು ಭಾವಿಸುತ್ತಾರೆ.
Advertisement