
ನವದೆಹಲಿ: 2025ರ ಏಷ್ಯಾ ಕಪ್ ಫೈನಲ್ ಪಂದ್ಯದ ಬಳಿಕ ಭಾರತ ತಂಡಕ್ಕೆ ನೀಡಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ಕದ್ದು ಹೊತ್ತೊಯ್ದಿದ್ದ ಪಾಕಿಸ್ತಾನ ಸಚಿವ, ಪಿಸಿಬಿ ಅಧ್ಯಕ್ಷ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೊನೆಗೂ ಬಿಸಿಸಿಐ (BCCI) ಮಂಡಿಯೂರಿದ್ದಾರೆ.
ಹೌದು.. ಏಷ್ಯಾಕಪ್ 2025 ಫೈನಲ್ ಪಂದ್ಯದ ಕೊನೆಯಲ್ಲಿ ಭಾರತ ತಂಡಕ್ಕೆ ಟ್ರೋಫಿ ನೀಡದೆ ಕದ್ದೊಯ್ದಿದ್ದ ಮೊಹ್ಸಿನ್ ನಖ್ವಿ ಇದೀಗ ಅಡಕತ್ತರಿಗೆ ಸಿಲುಕಿದ್ದು, ಬಿಸಿಸಿನ ವಾಗ್ದಂಡನೆಗೆ ಬೆದರಿದ ನಖ್ವಿ ತಮ್ಮ ಬಳಿ ಇದ್ದ ಏಷ್ಯಾಕಪ್ ಟ್ರೋಫಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ನಖ್ವಿ ಪದಚ್ಯುತಿಗೆ ಮುಂದಾದ ಬಿಸಿಸಿಐ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರೂ ಆಗಿರುವ ನಖ್ವಿ ಅವರು ಭಾರತೀಯ ತಂಡಕ್ಕೆ ಇನ್ನೂ ಟ್ರೋಫಿಯನ್ನು ಹಸ್ತಾಂತರಿಸದ ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅವರ ದೋಷಾರೋಪಣೆಗೆ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾತ್ರವಲ್ಲದೇ ನಖ್ವಿ ಪದಚ್ಯುತಿಗೂ ಬಿಸಿಸಿಐ ಮುಂದಾಗಿದ್ದು, ಶಿಷ್ಟಾಚಾರದ ಉಲ್ಲಂಘನೆಗಳ ಸರಣಿ ಆರೋಪ ಮಾಡಿರುವ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇತರೆ ಸದಸ್ಯ ರಾಷ್ಟ್ರಗಳೊಂದಿಗೆ ಸತತ ಸಭೆಗಳನ್ನು ನಡೆಸುತ್ತಿದೆ. ಇತರೆ ಸದಸ್ಯ ರಾಷ್ಟ್ರಗಳ ಒಪ್ಪಿಸಿ ನಖ್ವಿ ಪದಚ್ಯುತಗೊಳಿಸಲು ಬಿಸಿಸಿಐ ಕಾರ್ಯತಂತ್ರ ಹೆಣೆಯುತ್ತಿದೆ ಎಂದು ಹೇಳಲಾಗಿದೆ.
ಈ ವಿಷಯವನ್ನು ಐಸಿಸಿಗೆ ತಿಳಿಸಲು ಉದ್ದೇಶಿಸಿರುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಉದ್ದೇಶವಿದೆ.
ನಖ್ವಿ ನಡೆಯಿಂದ ಕ್ರಿಕೆಟ್ ಗೆ ಅಪಮಾನ
ನಖ್ವಿ ಏಷ್ಯನ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎರಡಕ್ಕೂ ಕ್ರಿಕೆಟ್ ಆಡಳಿತದ ಖ್ಯಾತಿಗೆ ತೀವ್ರ ಹಾನಿಯನ್ನುಂಟುಮಾಡಿದ್ದಾರೆ ಎಂದು ಬಿಸಿಸಿಐ ವಾದಿಸುತ್ತಿದ್ದು, ಇತ್ತೀಚೆಗೆ ವರ್ಚುವಲ್ ಎಸಿಸಿ ಸಭೆಯಲ್ಲಿ ನಖ್ವಿ ಅವರನ್ನು ಎಸಿಸಿ ಮತ್ತು ಐಸಿಸಿ ಸದಸ್ಯರು ಸತತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.
ನಖ್ವಿಯವರ ಕ್ರಮಗಳು ನೇರವಾಗಿ ಅಧಿಕಾರ ದುರುಪಯೋಗ ಮತ್ತು ಕ್ರೀಡಾ ಮಾನದಂಡಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಈ ತಂಡ ಅಭಿಪ್ರಾಯಪಟ್ಟದೆ. ಅಲ್ಲದೆ ನಖ್ವಿಗೆ ವಾಗ್ದಂಡನೆ ಹೇರಬೇಕು ಎಂಬ ನಿರ್ಣಯಕ್ಕೂ ಬಂದಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ವರದಿ ಮಾಡಿದೆ.
ಬಿಸಿಸಿಐನ ಈ ನಡೆಗೆ ಬೆದರಿದೆ ನಖ್ವಿ ಇದೀಗ ಟ್ರೋಫಿಯನ್ನು ಯುಎಇ ಬೋರ್ಡ್ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಏಷ್ಯಾ ಕಪ್ ಟ್ರೋಫಿ, ಯುಎಇ ಕ್ರಿಕೆಟ್ ಮಂಡಳಿ ಕಚೇರಿಯಲ್ಲಿದೆ. ಟ್ರೋಫಿಯನ್ನು ಹೇಗೆ ಮತ್ತು ಯಾವಾಗ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂಬುದು ಇನ್ನೂ ದೃಢೀಕರಿಸಲಾಗಿಲ್ಲ.
ಚಿಕ್ಕಮಕಳ ರೀತಿ ಟ್ರೋಫಿ ಕದ್ದೊಯ್ದಿದ್ದ ನಖ್ವಿ
ಕಳೆದ ಭಾನುವಾರ ದುಬೈನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಮಣಿಸಿದ್ದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದು ಪಂದ್ಯದ ಬಳಿಕ ಭಾರತ ತಂಡಕ್ಕೆ ಟ್ರೋಫಿ ನೀಡದ ಎಸಿಸಿ ಅಧ್ಯಕ್ಷ ನಖ್ವಿ ಗಲ್ಲಿ ಕ್ರಿಕೆಟ್ ಆಡುವ ಮಕ್ಕಳ ರೀತಿಯಲ್ಲಿ ಅವರ ಹೊಟೇಲ್ ರೂಂಗೆ ತೆಗೆದುಕೊಂಡು ಹೋಗಿದ್ದರು.
Advertisement