
ದುಬೈ: ಭಾನುವಾರ ಪಾಕ್ ವಿರುದ್ಧದ ಫೈನಲ್ ಪಂದ್ಯ ಗೆದ್ದ ಬಳಿಕ ಏಷ್ಯಾ ಕಪ್ 2025 ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಟ್ರೋಫಿಯನ್ನು ಎತ್ತಿಕೊಂಡು ಹೋಗಿ ಟ್ರೋಲ್ ಆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗ ಹೊಸ ನಾಟಕ ಆಡಲು ಆರಂಭಿಸಿದ್ದಾರೆ.
ಟೀಂ ಇಂಡಿಯಾಗೆ ಟ್ರೋಫಿ ಹಾಗೂ ಪದಕ ನೀಡುತ್ತೇನೆ. ಆದರೆ ‘ಔಪಚಾರಿಕ ಸಮಾರಂಭ’ವನ್ನು ಆಯೋಜಿಸಬೇಕೆಂಬ ಬೇಡಿಕೆಯನ್ನು ಆಯೋಜಕರ ಮುಂದಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆದರೆ ಈ ರೀತಿಯ ಕಾರ್ಯಕ್ರಮ ಆಯೋಜನೆ ಸಾಧ್ಯತೆ ಇದ್ದಂತಿಲ್ಲ. ಹೀಗಾಗಿ ಟ್ರೋಫಿ ವಿವಾದ ಇನ್ನೂ ಕೆಲವು ದಿನ ಹೀಗೆ ಮುಂದುವರೆಯುವ ಸಾಧ್ಯತೆಯಿದೆ.
ನಖ್ವಿ ನಡೆ ವಿರುದ್ಧ ಐಸಿಸಿಗೆ ದೂರು ನೀಡಲು ಬಿಸಿಸಿಐ ನಿರ್ಧರಿಸಿದೆ. ಟೀಂ ಇಂಡಿಯಾದ ನಿಲುವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ. ನಮ್ಮ ವಿರುದ್ಧ ಯುದ್ಧ ನಡೆಸುತ್ತಿರುವ ವ್ಯಕ್ತಿಯಿಂದ ಭಾರತ ಟ್ರೋಫಿ ಸ್ವೀಕರಿಸಲು ಸಾಧ್ಯವಿಲ್ಲ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಅಂದಿದೆ. ಹೀಗಾಗಿ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪ್ರತಿಭಟಿಸಲು ಬಿಸಿಸಿಐ ನಿರ್ಧರಿಸಿದೆ.
ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮತ್ತು ಪಾಕಿಸ್ತಾನದ ಪ್ರಭಾವಿ ರಾಜಕಾರಣಿಯೂ ಹೌದು. ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು.
Advertisement