ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಧಾರ್ ಪೂನಾವಾಲಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನ್ನು ಸ್ವಾಧೀನಪಡಿಸಿಕೊಳ್ಳುವ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ.
ಜೂನ್‌ನಲ್ಲಿ, ಆರ್‌ಸಿಬಿಯ ಮಾಲೀಕರಾದ ಬ್ರಿಟಿಷ್ ಸ್ಪಿರಿಟ್ಸ್ ದೈತ್ಯ ಡಿಯಾಜಿಯೊ ಪಿಎಲ್‌ಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಗಳು ಹೊರಬಿದ್ದಿದ್ದವು. ನಂತರ ನಿನ್ನೆ, ಪೂನವಾಲಾ ಫ್ರಾಂಚೈಸಿಯ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಡಿಯಾಜಿಯೊ ಆರ್‌ಸಿಬಿಯನ್ನು ಒಂದು ಪ್ರಮುಖ ವ್ಯವಹಾರ ಘಟಕವಾಗಿ ನೋಡುವುದಿಲ್ಲ, ಮತ್ತು ಫ್ರಾಂಚೈಸಿ ಐಪಿಎಲ್ 2025 ಟ್ರೋಫಿಯನ್ನು ಗೆದ್ದ ನಂತರ, ಅದನ್ನು ಮಾರಾಟ ಮಾಡಲು ಇದು ಸರಿಯಾದ ಸಮಯ ಎಂದು ಅವರು ಭಾವಿಸಿರಬಹುದು. 'ಆರ್‌ಸಿಬಿ ಒಂದು ರೋಮಾಂಚಕಾರಿ ವ್ಯವಹಾರವಾಗಿದೆ. ಆದರೆ, ಇದು ಡಿಯಾಜಿಯೊಗೆ ಮುಖ್ಯವಲ್ಲ' ಎಂದು ಡಿಯಾಜಿಯೊ ಇಂಡಿಯಾದ ಎಂಡಿ ಮತ್ತು ಸಿಇಒ ಪ್ರವೀಣ್ ಸೋಮೇಶ್ವರ್ ಈ ತಿಂಗಳ ಆರಂಭದಲ್ಲಿ ಸಿಎನ್‌ಬಿಸಿ-ಟಿವಿ 18ಗೆ ತಿಳಿಸಿದ್ದರು.
ಆರಂಭದಲ್ಲಿ, ಡಿಯಾಜಿಯೊ ಆರ್‌ಸಿಬಿಯನ್ನು $2 ಬಿಲಿಯನ್ (ಸುಮಾರು 17,762 ಕೋಟಿ ರೂ.) ಗೆ ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ, ಅವರು ಅದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 'ನಾವು ಮಾರುಕಟ್ಟೆ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ' ಎಂದು ಡಿಯಾಜಿಯೊ ವಕ್ತಾರರು CNBC-TV18 ಗೆ ತಿಳಿಸಿದ್ದಾರೆ.
ನಿನ್ನೆ ಸುದ್ದಿ ಹೊರಬಿದ್ದಾಗ ಪೂನಾವಾಲಾ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಆದರೆ ಈಗ, ಫ್ರಾಂಚೈಸಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. 'ಸರಿಯಾದ ಮೌಲ್ಯಮಾಪನದಲ್ಲಿ, @RCBTweets ಒಂದು ಉತ್ತಮ ತಂಡವಾಗಿದೆ' ಎಂದು ಪೂನಾವಾಲಾ ಬರೆದಿದ್ದಾರೆ. ಇದು ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಳ್ಳುವ ಅವರ ಆಸಕ್ತಿಗೆ ರೆಕ್ಕೆಪುಕ್ಕ ನೀಡಿದಂತಾಗಿದೆ.
ಡಿಯಾಜಿಯೊ ಮತ್ತು ಆಸಕ್ತಿ ಉಳ್ಳವರ ನಡುವಿನ ಮುಂಬರುವ ಒಪ್ಪಂದಕ್ಕೆ ಸಿಟಿಬ್ಯಾಂಕ್ ಅನ್ನು ವಹಿವಾಟು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಹಂತದಲ್ಲಿ, 'ಬೆಲೆ'ಯೇ ಚರ್ಚೆಯ ವಿಷಯವಾಗಿರುವಂತೆ ತೋರುತ್ತಿದೆ. ಡಿಯಾಜಿಯೊ ಮತ್ತು ಪೂನಾವಾಲಾ ನಡುವೆ ಮೌಲ್ಯಮಾಪನದ ವಿಚಾರ ಚರ್ಚೆಯಾದರೆ, ಐಪಿಎಲ್ 2026ಕ್ಕಿಂತ ಮೊದಲು ಈ ಒಪ್ಪಂದವು ಕಾರ್ಯರೂಪಕ್ಕೆ ಬರಬಹುದು.
Advertisement